ಹಾಸನ:ಸಕಲೇಶಪುರದ ಬೈಕರವಳ್ಳಿ ಗ್ರಾಮದಲ್ಲಿ ನವಜಾತ ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಮಗುವಿನ ತಾಯಿ ಮತ್ತು ಆಶಾ ಕಾರ್ಯಕರ್ತೆ ಸೇರಿದ್ದಾರೆ.
ಆರೋಪಿಗಳನ್ನು ಹರಗವಳ್ಳಿಯ ಮಗುವಿನ ತಾಯಿ ಗಿರಿಜಾ, ಹಿರಿಯೂರು ಕೂಡಿಗೆಯ ಸುಮಿತ್ರಾ, ಹೊಸಳ್ಳಿಯ ಸುಬ್ರಮಣಿ, ಅವರ ಮಗ ಶ್ರೀಕಾಂತ್ ಮತ್ತು ಚಿಕ್ಕಮಗಳೂರಿನ ಉಷಾ ಎಂದು ಗುರುತಿಸಲಾಗಿದೆ.
ಒಂದು ದಿನದ ಹಸುಳೆಯನ್ನು ಮಾರಾಟ ಮಾಡಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಷಕರಿಗೆ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದೆ ಮಗುವನ್ನು ಮಾರಾಟ ಮಾಡಲಾಗಿದೆಯೇ ಅಥವಾ ಇನ್ನಾವುದೇ ಕಾರಣಕ್ಕಾಗಿ ಮಗುವನ್ನು ಮಾರಾಟ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಗಿರಿಜಾ ಮತ್ತು ಆಕೆಯ ಪತಿ ಸೋಮಶೇಖರ್, ಸುಬ್ರಮಣಿ ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ನ.13ರಂದು ಹೆತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಗಿರಿಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಶಾ ಕಾರ್ಯಕರ್ತೆ ಸುಮಿತ್ರಾ ಅವರ ಸಹಾಯದಿಂದ ಮಗುವನ್ನು ಉಷಾಗೆ ಮಾರಾಟ ಮಾಡಲಾಗಿದೆ ಎಂದು ಅವರು ಹೇಳಿದರು.