ಬೆಂಗಳೂರು: 10 ವರ್ಷಗಳಲ್ಲಿ ಅಚ್ಚೇ ದಿನಗಳನ್ನ ತರದೇ ಈಗ 2047 ರ ವರೆಗೆ ಸಮಯ ಕೇಳುತ್ತಿರುವ ಮೋದಿಯವರಿಗೆ ಯಾವ ನೈತಿಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮೋದಿಯವರು ಮೊದಲು 5 ವರ್ಷ ಕೇಳಿದ್ದರು. ಆದರೆ ಅವರು ಅಧಿಕಾರಕ್ಕೇರಿ 10 ವರ್ಷಗಳೇ ಕಳೆದಿವೆ. ಈಗ ಮತ್ತೆ 23 ವರ್ಷ ಸಮಯ ಕೇಳ್ತಿದ್ದಾರೆ. ಅಂದರೆ 10 ವರ್ಷಗಳಲ್ಲಿ ಜನರ ಬದುಕಿನಲ್ಲಿ ಅಚ್ಚೇ ದಿನಗಳು ಬರಲಿಲ್ಲ ಎಂಬುದನ್ನ ಮೋದಿಯವರೇ ಒಪ್ಪಿಕೊಂಡಂತಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೊದಲು 10 ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನ ಜನರ ಮುಂದಿಟ್ಟು ಮೋದಿಯವರು ಮತ ಕೇಳಲಿ. ದೇಶದ ಬಡವರಿಗೆ ಇವರು ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯವನ್ನಂತೂ ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳ ನೈಜ ಪ್ರಶ್ನೆಗಳಿಗೆ ಒಂದಕ್ಕೂ ಮೋದಿಯವರು ಉತ್ತರ ಕೊಟ್ಟಿಲ್ಲ. ನಾಳೆ ಅಮಿತ್ ಶಾ ಅವರು ರಾಜ್ಯಕ್ಕೆ ಬರ್ತಿದ್ದಾರೆ. ಅಮಿತ್ ಶಾ ಅವರಾದರೂ ಅಂಕಿ ಅಂಶಗಳ ಸಮೇತ ಉತ್ತರಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.
ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಮೋದಿಯವರು ಮಾತನಾಡುತ್ತಾರೆ. ನೈಜವಾಗಿ ಇದು ಆರೋಗ್ಯ ಕರ್ನಾಟಕ ಯೋಜನೆ. ಅದನ್ನೇ ಅವರು ಆಯುಷ್ಮಾನ್ ಭಾರತ್ ಎಂದು ನಾಮಕರಣ ಮಾಡಿಕೊಂಡ್ರು. ವಾಸ್ತವವಾಗಿ ನೋಡಿದರೆ ಆಯುಷ್ಮಾನ್ ಭಾರತ್ ಯೋಜನೆಗೆ ಶೇ 70 ರಷ್ಟು ಹಣ ಕೊಡುತ್ತಿರುವುದು ಕರ್ನಾಟಕ ಸರ್ಕಾರ. ಕೇಂದ್ರದಿಂದ ಬರುತ್ತಿರುವುದು ಕೇವಲ 30 ರಷ್ಟು ಮಾತ್ರ. ಇಲ್ಲಿಯ ವರೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 1920 ಕೋಟಿ ಮಾತ್ರ ಕೇಂದ್ರದಿಂದ ಬಂದಿದೆ. ಆದರೆ 4790 ಕೋಟಿ ಹಣವನ್ನ ರಾಜ್ಯ ಸರ್ಕಾರವೇ ಭರಿಸಿದೆ. ಶೇ 70 ರಷ್ಟು ಹಣವನ್ನ ನಾವೇ ಕೊಡುತ್ತಿರುವಾಗಿ ಕರ್ನಾಟಕಕ್ಕೆ ಮೋದಿಯವರ ಕೊಡುಗೆ ಏನು ಎಂದು ಆರೋಗ್ಯ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ವೃದ್ದಾಪ್ಯ ವೇತನ,ಅಂಗವಿಕಲ ವೇತನಗಳನ್ನ ಮೋದಿಯವರು ಒಂದು ರೂಪಾಯಿ ಕೂಡ ಹೆಚ್ಚು ಮಾಡಿಲ್ಲ. ವೃದ್ಧಾಪ್ಯ ವೇತನದಲ್ಲಿ ರಾಜ್ಯ ಸರ್ಕಾರದ್ದು 400 ರೂ. ಕೇಂದ್ರದ್ದು 200 ರೂಪಾಯಿ ಮಾತ್ರ. ವಿಧವಾ ವೇತನ ಕೇಂದ್ರದ್ದು 500 ರಾಜ್ಯದ್ದು 700ರೂ. ಅಂಗ ವಿಕಲಚೇತನ ಕೇಂದ್ರದ್ದು 300, ರಾಜ್ಯದ್ದು 3900. ಸಂಧ್ಯಾ ಸುರಕ್ಷಾ ಕೇಂದ್ರದ್ದು ಶೂನ್ಯ. ನಮ್ಮದು 1200. ಮನಸ್ವಿನಿ ಕೇಂದ್ರದ್ದು ಶೂನ್ಯ. ನಮ್ಮದು 800.ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ರಾಜ್ಯ ಸರ್ಕಾರ 2000 ರೂ ನೀಡುತ್ತಿದೆ ಕೇಂದ್ರದಿಂದ ಯಾವುದೇ ನೆರವು ಸಿಗುತ್ತಿಲ್ಲ. ಬಡವರಿಗೆ ಅಕ್ಕಿ ಯನ್ನ 30 ರೂ ಯಿಂದ 3 ರೂ. ಕೊಡುವ ತೀರ್ಮಾನವನ್ನ ಫುಡ್ ಸೆಕ್ಯುರಿಟಿ ಕಾಯ್ದೆ ತರುವ ಮೂಲಕ ಮಾಡಿದ್ದು ಕಾಂಗ್ರೆಸ್ ಯು.ಪಿ.ಎ ಸರ್ಕಾರ. 3 ರೂಪಾಯಿಯನ್ನ ಕಡಿಮೆ ಮಾಡಿ ಅದೇ ದೊಡ್ಡ ಯೋಜನೆ ಎಂದು ಮೋದಿಯವರು ಹೇಳಿಕೊಳ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಮೋದಿಯವರು ಹೇಳಿಕೊಳ್ತಿದ್ದಾರೆ. ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬಂದಿದ್ಧು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ. ಅದಕ್ಕೆ ಅಡಿಪಾಯ ಹಾಕಿದ್ದೇ ಕಾಂಗ್ರೆಸ್. ವಿಶೇಷವಾಗಿ ಕರ್ನಾಟಕಕ್ಕೆ ಶೇ 22 ರಷ್ಟು ವಿದೇಶಿ ಬಂಡವಾಳ ಹರಿದು ಬರುತ್ತಿದೆ. ಕ್ಯಾಶ್ ಲೆಸ್ ಮಾಡಲು ರೂಪಾಯಿ ಅಪಮೌಲ್ಯ ಮಾಡಿದ್ದೇನೆ ಎಂದು ಮೋದಿಯವರು ಹೇಳಿಕೊಂಡ್ರು. ರೂಪಾಯಿ ಅಪಮೌಲ್ಯದಿಂದ ಕ್ಯಾಶ್ ವಹಿವಾಟನ್ನ ಕಡಿಮೆ ಮಾಡದಿದ್ದರೆ ನನ್ನನ್ನ ಗಲ್ಲಿಗೇರಿಸಿ ಎಂದು ಬಹಿರಂಗವಾಗಿ ಮೋದಿಯವರು ಮಾತಾಡಿದ್ದರು. ಆದರೆ ವಿಪರ್ಯಾಸ ಮೊದಲು 15 ಲಕ್ಷ ಕೋಟಿಯಷ್ಟಿದ್ದ ಕ್ಯಾಶ್ ವ್ಯವಹಾರ ಇಂದು 35 ಲಕ್ಷ ಕೋಟಿಯಷ್ಟು ಕ್ಯಾಶ್ ದೇಶದಲ್ಲಿ ಹರಿದಾಡ್ತಿದೆ.
ಕರ್ನಾಟಕದಿಂದ ಹೆಚ್ಚು ಲಾಭ ಪಡೆಯುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದೇನು. ಮನೆಕಟ್ಟಲು ಕೊಡುವ ಹಣದಲ್ಲೂ ಶೇ 18 ರಷ್ಟು ಜಿಎಸ್ ಟಿ ಪಡೆಯುತ್ತಾರೆ. ಬೆಂಗಳೂರಿನ ನೀರಿನ ಬವಣೆ ಬಗ್ಗೆ ಮಾತಾನಾಡುತ್ತಾರೆ. ಐಟಿ ಸಿಟಿ ಬೆಂಗಳೂರನ್ನ ಟ್ಯಾಂಕರ್ ಸಿಟಿ ಎಂದು ಮೋದಿಯವರು ಹೇಳಿ ಹೋಗಿದ್ದಾರೆ. ಹಾಗೆ ಹೇಳಲು ಇವರಿಗೆ ಯಾವ ಅರ್ಹತೆ ಇದೆ. ಬೆಂಗಳೂರನ್ನ ಐಟಿ ಸಿಟಿಯನ್ನಾಗಿ ಮೋದಿಯವರು ಮಾಡಿದ್ರಾ.? ಕರ್ನಾಟಕದಲ್ಲಿ ಬರ ಇರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನ ನಿರ್ವಹಿಸುತ್ತಿದೆ. ಬೆಂಗಳೂರಿನ ನೀರಿನ ಮೂಲಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡ್ತೇವೆ ಎಂದಿದ್ದ ಕೇಂದ್ರ ಸರ್ಕಾರ ಒಂದು ರೂಪಾಯಿ ಕೊಡಲಿಲ್ಲ. ಬೆಂಗಳೂರಿನಿಂದ ಹೆಚ್ಚು ತೆರಿಗೆ ಪಡೆದು ಈಗ ಬೆಂಗಳೂರಿನ್ನ ಟೀಕಿಸುತ್ತಿದ್ದಾರೆ. ಒಬ್ಬ ಪ್ರಧಾನಿಯವರು ಹೀಗೆ ಮಾತಾಡುವುದು ಸರಿಯಲ್ಲ. ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ದೇಶದಲ್ಲಿ ಬಿಜೆಪಿ 200 ಸ್ಥಾನ ಗಳಿಸುವುದು ಕಷ್ಟ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಚೊಂಬನ್ನ ಅಕ್ಷಯ ಪಾತ್ರೆ ಎನ್ನುವ ದೇವೇಗೌಡರು ರಾಜ್ಯದ ಹಿತ ಮರೆತರೇ ಕರ್ನಾಟಕವನ್ನ ಮೋದಿಯವರು ಕಡೆಗಣಿಸಿರುವುದು ಸ್ಪಷ್ಟ. ತೆರಿಗೆಯಲ್ಲಾದ ಅನ್ಯಾಯ ಸೇರಿದಂತೆ ಯೋಜನೆಗಳಲ್ಲಿ ಕೇಂದ್ರ ನಮ್ಮ ರಾಜ್ಯಕ್ಕೆ ಅತಿ ಕಡಿಮೆ ಅನುದಾನ ಕೊಡುತ್ತಿರುವುದನ್ನ ಅಂಕಿ ಅಂಶಗಳ ಸಮೇತ ಕಾಂಗ್ರೆಸ್ ಜನರ ಮುಂದಿಟ್ಟಿದೆ.
ಹೀಗಾಗಿಯೇ ಮೋದಿಯವರಿಗೆ ಕರ್ನಾಟಕದಲ್ಲಿ ಚೊಂಬು ತೋರಿಸಿದ್ದೇವೆ. ಆದರೆ ಚೊಂಬನ್ನ ದೇವೇಗೌಡರು ಅಕ್ಷಯ ಪಾತ್ರೆ ಎಂದು ಕರೆದಿದ್ದಾರೆ. ಅಕ್ಷಯ ಪಾತ್ರೆ ಗುಜರಾತ್ ಉತ್ತರ ಪ್ರದೇಶಕ್ಕಿರಬಹುದು. ಆದರೆ ಕರ್ನಾಟಕಕ್ಕೆ ಮೋದಿಯವರು ಕೊಟ್ಟಿದ್ದು ಚೊಂಬು. ದೇವೇಗೌಡರು ಕರ್ನಾಟಕದ ಹಿತವನ್ನ ಮರೆತು ಹೀಗೆ ಮಾತಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಹೇಳಿದರು.
ಬೆಲೆ ಏರಿಕೆ, GST ಹೊರೆ, ಇದು ಮೋದಿಯವರ ನಿಜವಾದ ಗ್ಯಾರಂಟಿ: ಡಿ.ಕೆ. ಸುರೇಶ್ ವಾಗ್ಧಾಳಿ
ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!