ಹೆಸರಾಂತ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರಿಗೆ ಭಾರತೀಯ ಜನತಾ ಪಕ್ಷವು ಮಹತ್ವದ ಹೊಣೆಗಾರಿಕೆ ವಹಿಸಿದ್ದು,ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವವರಿಗೆ ಪಕ್ಷದ ಜವಾಬ್ದಾರಿ ನೀಡಿ ರಾಜಕೀಯಕ್ಕೆ ಕರೆತರುವ ಕಾರ್ಯವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ಕಳೆದ ಕೆಲವು ವರ್ಷಗಳಿಂದ ಮಾಡುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಹರಿಪ್ರಕಾಶ್ ಕೋಣೆಮನೆ ಅವರು ಬಿಜೆಪಿ ಸೇರ್ಪಡೆಯಾದಂತಾಗಿದೆ.
ವಿಸ್ತಾರ ಮೀಡಿಯಾ ಪ್ರೈ. ಲಿ.ನ ಪ್ರಧಾನ ಸಂಪಾದಕ ಹಾಗೂ ಸಿಇಒ ಆಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಹರಿಪ್ರಕಾಶ್ ಅವರು ರಾಜಕೀಯ ಪ್ರವೇಶಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆ ಕಾರಣದಿಂದಾಗಿ ಸಂಸ್ಥೆಯ ಉನ್ನತ ಹುದ್ದೆಗಳಿಂದ ಈಗಾಗಲೇ ಅವರು ಹೊರಬಂದಿದ್ದಾರೆ ಎನ್ನಲಾಗಿದೆ. ಪ್ರಧಾನ ಸಂಪಾದಕ ಹಾಗೂ ಸಿಇಒ ಸ್ಥಾನಗಳಿಗೆ ಈಗಾಗಲೇ ರಾಜೀನಾಮೆ ನೀಡಿರುವ ಅವರು ಸಂಸ್ಥೆಯ ಆಡಳಿತ ಮಂಡಳಿಯ ಕೋರಿಕೆಯಂತೆ ಸಂಸ್ಥೆಯ ನಿರ್ದೇಶಕರಾಗಿ ಮುಂದುವರಿಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲೆಕ್ಕಾಚಾರವೇನು?: ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಆಯ್ದ ಪ್ರಮುಖರನ್ನು ರಾಜಕೀಯಕ್ಕೆ ಕರೆತಂದು ಮಹತ್ವದ ಜವಾಬ್ದಾರಿ ನೀಡುವ ಪರಿಪಾಠವನ್ನು ಬಿಜೆಪಿ ಹೈಕಮಾಂಡ್ ಕೆಲವು ವರ್ಷಗಳಿಂದ ಮಾಡುತ್ತಿದೆ. ಈ ಮೂಲಕ ವಿಭಿನ್ನ ಆಲೋಚನೆಯ ಯುವ ಮುಖಗಳಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಬಿಜೆಪಿ ವರಿಷ್ಠರು ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರ ಆಯ್ಕೆಯಿಂದ ಹಿಡಿದು ರಾಜಸ್ಥಾನ ಮುಖ್ಯಮಂತ್ರಿ ಆಯ್ಕೆಯವರೆಗೆ ಹಲವು ಉದಾಹರಣೆಗಳು ನಮಗೆ ಸಿಗುತ್ತವೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಕಾರ್ಯತಂತ್ರದ ಭಾಗವಾಗಿ ಮತ್ತು ಸಂಘ ಪರಿವಾರದ ಅನೇಕ ಹಿರಿಯರ ಒತ್ತಾಸೆಗೆ ಅನುಗುಣವಾಗಿ ಕರ್ನಾಟಕದಲ್ಲಿ ಹರಿಪ್ರಕಾಶ್ ಅವರಿಗೆ ಪಕ್ಷದ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಹರಿಪ್ರಕಾಶ್ ಕೋಣೆಮನೆ ಶಾಲಾ ದಿನಗಳಿಂದಲೇ ಆರೆಸ್ಸೆಸ್ ತೆಕ್ಕೆಗೆ ಬಂದವರು. ಓದಿನ ಜೊತೆಗೆ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವಿ. ಕಾಲೇಜು ದಿನಗಳಲ್ಲಿ ಸಂಘದ ಚಟುವಟಿಕೆ ಜೊತೆಗೆ ಎಬಿವಿಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದವರು. ಓದಿನ ಬಳಿಕ ವೃತ್ತಿ ಜೀವನದ ಉದ್ದಕ್ಕೂ ಸಂಘ ಪರಿವಾರದ ಬಹಳಷ್ಟು ಸಂಘಟನೆಗಳೊಂದಿಗೆ ನಿರಂತರ ನಿಕಟವಾಗಿ ಗುರುತಿಸಿಕೊಂಡವರು.
ಪ್ರಬಲ ವೈಚಾರಿಕಾ ಪ್ರತಿಪಾದಕ: ಕಳೆದ ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಹರಿಪ್ರಕಾಶ್ ಅವರು ವಿವಿಧ ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ ರಾಷ್ಟ್ರೀಯತೆ, ಹಿಂದೂ ಧರ್ಮ ಮತ್ತು ಸಾಂಸ್ಕೃತಿಕ ರಾಷ್ಟ್ರವಾದವನ್ನು ಬಲವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಈ ಎಲ್ಲ ಕಾರಣಗಳಿಂದ ಬಿಜೆಪಿ ವೇದಿಕೆಗೆ ಹರಿಪ್ರಕಾಶ್ ಅವರನ್ನು ಕರೆತರಲಾಗಿದೆ ಎನ್ನಲಾಗುತ್ತಿದೆ. ಇವರಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಇನ್ನಷ್ಟು ಪ್ರಮುಖರು ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಪ್ರಭಾವಿ ಪತ್ರಕರ್ತ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರಾದ ಹರಿಪ್ರಕಾಶ್ ಕೋಣೆಮನೆ ಅವರು 2002ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟವರು. ಪತ್ರಕರ್ತರಾಗಿ ಹೆಸರುವಾಸಿಯಾಗಿರುವ ಹರಿಪ್ರಕಾಶ್ ಪ್ರಮುಖ ಪತ್ರಿಕಾ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. 2022ರಲ್ಲಿ ವಿಸ್ತಾರ ನ್ಯೂಸ್ ಚಾನೆಲ್ ಆರಂಭಿಸುವ ಮೂಲಕ ಕರ್ನಾಟಕ ಮಾಧ್ಯಮ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟವರು. ಇದರ ಸಿಇಒ ಮತ್ತು ಪ್ರಧಾನ ಸಂಪಾದಕರಾಗಿ ಇವರು ನಡೆಸಿ ಕೊಟ್ಟಿರುವ ಪ್ರೈಮ್ ಟೈಮ್ ಕಾರ್ಯಕ್ರಮ ʼನ್ಯೂಸ್ ಫ್ರಂಟ್ಲೈನ್ ವಿತ್ ಎಚ್ಪಿಕೆ ʼ, ʼಪವರ್ ಪಾಯಿಂಟ್ ವಿತ್ ಎಚ್ಪಿಕೆ ’, ‘ಮನದ ಮಾತು’ ಮೂಲಕ ಇವರು ಗಣ್ಯರನ್ನು ಸಂದರ್ಶಿಸುವ ಕಾರ್ಯಕ್ರಮಗಳು ಬಹು ಜನಪ್ರಿಯವಾಗಿವೆ.
ಇದಕ್ಕೂ ಮೊದಲು ಟೈಮ್ಸ್ ಆಫ್ ಇಂಡಿಯಾ ಸಮೂಹ ಸಂಸ್ಥೆಯ ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕೋವಿಡ್-19ನಂಥ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ರಾಜ್ಯದಲ್ಲಿ ಅತಿಹೆಚ್ಚು ಓದುಗರನ್ನು ಹೊಂದಿದ ಪತ್ರಿಕೆಯಾಗಿ ವಿಜಯ ಕರ್ನಾಟಕವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ರಕರ್ತರಾಗಿ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಉಷಾಕಿರಣ, ಟೈಮ್ಸ್ ಆಫ್ ಇಂಡಿಯಾ ಕನ್ನಡ, ಉದಯವಾಣಿ ಪತ್ರಿಕೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಅವರು ವಿಆರ್ಎಲ್ ಸಮೂಹ ಸಂಸ್ಥೆಯ ವಿಜಯವಾಣಿ ದಿನಪತ್ರಿಕೆಯನ್ನು ನಂಬರ್ ಒನ್ ಆಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ವಿಜಯವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಜನಪರ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದರು. ಬಳಿಕ ದಿಗ್ವಿಜಯ ನ್ಯೂಸ್ ಚಾನೆಲ್ ಆರಂಭಿಸಿ ಅದರ ಪ್ರಧಾನ ಸಂಪಾದಕರಾಗಿ ಮುನ್ನಡೆಸಿದ್ದರು.
ಸಂಘಟನಾ ಸಾಮರ್ಥ್ಯ: ಪತ್ರಿಕೋದ್ಯಮದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೆ ಸ್ವಂತ ಸಾಮರ್ಥ್ಯದಿಂದ ಬೆಳೆದುಬಂದಿರುವುದು ಹರಿಪ್ರಕಾಶ್ ಹೆಗ್ಗಳಿಕೆ. ಯಾವುದೇ ಸಂಸ್ಥೆಯಿರಲಿ, ಹುದ್ದೆಯಿರಲಿ… ವಹಿಸಿಕೊಂಡ ಜವಾಬ್ದಾರಿಯನ್ನು ದೂರದೃಷ್ಟಿಯಿಂದ ಮುನ್ನಡೆಸಿ ಯಶಸ್ವಿಗೊಳಿಸಿದ್ದು ಹಾಗೂ ತಮ್ಮದೇ ಛಾಪು ಮೂಡಿಸಿದ್ದು ಹರಿಪ್ರಕಾಶ್ ಸಾಮರ್ಥ್ಯಕ್ಕೆ ಸಾಕ್ಷಿ. ಎಲ್ಲ ಸಂಸ್ಥೆಗಳಲ್ಲೂ ಅತ್ಯುತ್ತಮ ತಂಡವನ್ನು ಕಟ್ಟಿದ್ದಲ್ಲದೆ ಕಠಿಣ ಪರಿಸ್ಥಿತಿಯಲ್ಲೂ ಸಹೋದ್ಯೋಗಿಗಳಲ್ಲಿ ಉತ್ಸಾಹ ತುಂಬಿ ಮುನ್ನಡೆಸಿದವರು ಹರಿಪ್ರಕಾಶ್ ಕೋಣೆಮನೆ. ಜನಪರ ಪತ್ರಿಕೋದ್ಯಮ, ವಿಭಿನ್ನ ಪ್ರಯೋಗಗಳ ಮೂಲಕ ಸುದ್ದಿಯಲ್ಲಿ ಹೊಸತನ ತರುವುದರ ಜತೆಗೆ ರಾಜ್ಯದ ಉದ್ದಗಲಕ್ಕೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಮಾಧ್ಯಮಗಳನ್ನು ಜನರೊಂದಿಗೆ ಬೆಸೆಯುವುದು ಅವರ ಸಂಘಟನಾ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ.
ಸಮರ್ಥ ಮಾತುಗಾರ: ಸಾಹಿತ್ಯಕ, ಸಾಮಾಜಿಕ ಹಾಗೂ ಧಾರ್ಮಿಕ/ಸಾಂಸ್ಕೃತಿಕ/ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಂಡು ಪ್ರಖರ ಭಾಷಣದ ಮೂಲಕ ಹರಿಪ್ರಕಾಶ್ ಅವರು ಸಾರ್ವಜನಿಕರ ಮನಗೆಲ್ಲುತ್ತಿದ್ದಾರೆ. ಇದಲ್ಲದೆ ವಿಸ್ತಾರ ನ್ಯೂಸ್ನ ‘ನ್ಯೂಸ್ ಫ್ರಂಟ್ಲೈನ್ ವಿತ್ ಎಚ್ಪಿಕೆ’ ಪ್ರೈಮ್ ಟೈಮ್ ಕಾರ್ಯಕ್ರಮದಲ್ಲಿ ವಿಭಿನ್ನ ವಿಶ್ಲೇಷಣೆ ಹಾಗೂ ತೀಕ್ಷ್ಣ ಒಳನೋಟವಿರುವ ಹರಿತ ಮಾತುಗಳ ಮೂಲಕ ಜನಪ್ರಿಯರಾಗಿದ್ದಾರೆ. ವಿಷಯದ ಎಲ್ಲ ಮಗ್ಗಲುಗಳ ಮೇಲೆ ಬೆಳಕು ಚೆಲ್ಲುವ ಜೊತೆಗೆ ದನಿಯನ್ನು ಎತ್ತರಿಸದೆ ವಿಚಾರ ಮಂಡನೆ ಮಾಡುವುದರಲ್ಲಿ ಇವರು ಹೆಸರುವಾಸಿ.
ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯ: ಸಂಘ ಪರಿವಾರಕ್ಕೆ ಸೇರಿದ ಸಾಹಿತ್ಯಕ ಸಂಘಟನೆ “ಅಖಿಲ ಭಾರತೀಯ ಸಾಹಿತ್ಯ ಪರಿಷದ್ “ ಕರ್ನಾಟಕದಲ್ಲಿ ಈಗ ಮುಂಚೂಣಿ ಸಾಹಿತ್ಯಕ ಸಂಘಟನೆ. ಅ.ಭಾ.ಸಾ.ಪ. ದ ರಾಜ್ಯ ಉಪಾಧ್ಯಕ್ಷರಾಗಿ ಪರಿಷತ್ತನ್ನು ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬೆಳೆಸುವಲ್ಲಿ ಹರಿಪ್ರಕಾಶ್ ಅವರ ಶ್ರಮ ಪ್ರಮುಖವಾಗಿದೆ. ಸತತ ಪ್ರವಾಸ, ಸಂಘಟನಾ ಸಭೆ, ಮೂರು ರಾಜ್ಯ ಸಮ್ಮೇಳನ ಸಂಘಟಿಸುವಲ್ಲಿ ಪ್ರಧಾನ ಪಾತ್ರ, ಎಲ್ಲ ಜಿಲ್ಲೆ ಮತ್ತು ಬಹುತೇಕ ತಾಲೂಕುಗಳಲ್ಲಿ ಪರಿಷದ್ ಕಾರ್ಯ ವಿಸ್ತರಣೆ, ಪರಿಷದ್ ನಿಂದ ಸಾಹಿತ್ಯ ಪ್ರಕಟಣೆ ವಿಭಾಗ ಪ್ರಾರಂಭ, ಪ್ರತಿಷ್ಠಿತ ವಾಗ್ದೇವೀ, ವಾಲ್ಮೀಕಿ ಪುರಸ್ಕಾರ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುವಲ್ಲಿ ಇವರ ವಿಶೇಷ ಶ್ರಮವಿದೆ.
ವಿಸ್ತಾರ ನ್ಯೂಸ್ಗೆ ಹೊಸ ಸಾರಥ್ಯ: ಹರಿಪ್ರಕಾಶ್ ಅವರು ರಾಜಕೀಯ ಹಾದಿ ತುಳಿಯುವುದು ಸ್ಪಷ್ಟವಾಗುತ್ತಿದ್ದಂತೆ ಕಳೆದ ಕೆಲ ತಿಂಗಳಲ್ಲಿ ವಿಸ್ತಾರ ನ್ಯೂಸ್ನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಡಿಜಿಟಲ್ ವಿಭಾಗವನ್ನು ಮುನ್ನಡೆಸುತ್ತಿದ್ದ ಸ್ಪೆಷಲ್ ಆಪರೇಷನ್ಸ್ ಎಡಿಟರ್ ಡಿ.ಕೆ. ಕಿರಣ್ ಕುಮಾರ್ ಅವರಿಗೆ ಬಡ್ತಿ ನೀಡಿ ಆಡಳಿತ ಮಂಡಳಿಗೆ ನೇಮಿಸಲಾಗಿದೆ. ಸಮಯ ನ್ಯೂಸ್, ಟಿವಿ9, ವಿಜಯವಾಣಿ, ವಿಜಯ ಕರ್ನಾಟಕ ಸೇರಿ ಹಲವು ಸಂಸ್ಥೆಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿ ಅನುಭವವಿರುವ ಡಿ.ಕೆ. ಕಿರಣ್ ಕುಮಾರ್ ಅವರು ಪ್ರಸ್ತುತ ವಿಸ್ತಾರ ಮೀಡಿಯಾ ಪ್ರೈ.ಲಿ.ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದು, ಹರಿಪ್ರಕಾಶ್ ಅವರು ನಿಭಾಯಿಸುತ್ತಿದ್ದ ಆಡಳಿತಾತ್ಮಕ ಹೊಣೆಗಾರಿಕೆಯನ್ನು ಕಿರಣ್ ಅವರಿಗೆ ವಹಿಸಲಾಗಿದೆ.
ಜತೆಗೆ, ಎರಡು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ, ಹಲವು ನ್ಯೂಸ್ ಚಾನೆಲ್ಗಳ ಕಾರ್ಯನಿರ್ವಹಿಸಿ ರಾಜ್ಯದ ಜನತೆಗೆ ಚಿರಪರಿಚಿತರಾಗಿರುವ ಹಿರಿಯ ಪತ್ರಕರ್ತ ಹರೀಶ್ ನಾಗರಾಜು ಅವರನ್ನು ವಿಸ್ತಾರ ನ್ಯೂಸ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಆರಂಭದಿಂದಲೂ ಸಂಸ್ಥೆಯಲ್ಲಿರುವ ಯುವ ಆ್ಯಂಕರ್ಗಳಿಗೆ ಹೆಚ್ಚಿನ ಅವಕಾಶ ನೀಡುವ ಜತೆ ಜತೆಗೇ ಇನ್ನಷ್ಟು ಹೆಸರಾಂತ ಆ್ಯಂಕರ್ಗಳು/ಪತ್ರಕರ್ತರು ವಿಸ್ತಾರ ನ್ಯೂಸ್ ತಂಡ ಸೇರ್ಪಡೆಗೂ ವೇದಿಕೆ ಅಣಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉ.ಕ. ಜಿಲ್ಲೆಯಲ್ಲಿ ಶೈಕ್ಷಣಿಕ ಸೇವೆ : ಶಿಕ್ಷಣ ಕ್ಷೇತ್ರ ಹರಿಪ್ರಕಾಶ್ ಅವರ ಮೆಚ್ಚಿನ ಕ್ಷೇತ್ರಗಳಲ್ಲಿ ಒಂದು. ವಿಶ್ವದರ್ಶನ ಶಿಕ್ಷಣ ಸಮೂಹದ ಮೂಲಕ ಯಲ್ಲಾಪುರದಂತಹ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಕಲ್ಪ ಮಾಡಿ ಸಹಸ್ರಾರು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಕಾರಣಕರ್ತರು. ವಿಶ್ವದರ್ಶನ ಶಿಕ್ಷಣ ಸಂಸ್ಥೆ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ.