ಬೆಂಗಳೂರು: ನಮ್ಮ ಬೆಂಗಳೂರು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನಕ್ಕೆ ಹೆಸರಾಗಿದೆ. ಈಗ ನಮ್ಮ ಯುವ ಪ್ರತಿಭೆಗಳು ನೇರವಾಗಿ ಮಂಗಳ ಗ್ರಹದ ಮಿಷನ್‌ಗಳಿಗೆ ಕೈಜೋಡಿಸುವ ಅವಕಾಶ ಬಂದಿದೆ.
ನಗರದ ಹೃದಯ ಭಾಗವಾದ ಜಯನಗರದಲ್ಲಿರುವ ಪಾರ್ಸೆಕ್ (ParSEC) ಸೆಂಟರ್ ಹಾಗೂ ಮೇಕರ್ಸ್ ಅಡ್ಡದಲ್ಲಿ 2025ರ ಡಿಸೆಂಬರ್ 19 ರಿಂದ 21ರವರೆಗೆ ‘ಹಾರ್ಡ್‌ವೇರ್ ಹ್ಯಾಕಥಾನ್ 2.0 – ಜರ್ನಿ ಟು ಮಾರ್ಸ್’ ಹಮ್ಮಿಕೊಳ್ಳಲಾಗಿದೆ. ಇದು 72 ಗಂಟೆಗಳ ಕಾಲ ನಡೆಯುವ ಒಂದು ಸ್ಪೆಷಲ್ ಹಾರ್ಡ್‌ವೇರ್ ಹ್ಯಾಕಥಾನ್ ಆಗಿದೆ. ಮಂಗಳ ಗ್ರಹದಲ್ಲಿ ಮನುಷ್ಯರು ಬದುಕಲು ಮತ್ತು ಪ್ರಯಾಣಿಸಲು ನೆರವಾಗುವ ಅತ್ಯಾಧುನಿಕ ಟೆಕ್ ಪರಿಹಾರಗಳನ್ನು ಇಲ್ಲಿ ವಿನ್ಯಾಸಗೊಳಿಸಬೇಕು ಮತ್ತು ಪ್ರೋಟೋಟೈಪ್ ಮಾಡಬೇಕು.
ಇದರಲ್ಲಿ ಏನು ವಿಶೇಷ?
ಮೇಕರ್‌ಗಳು ಮತ್ತು ಎಂಜಿನಿಯರ್‌ಗಳ ಕೆಲಸ ಸುಲಭವಾಗಿಸಲು, ನಿಮ್ಮದೇ ವಿನ್ಯಾಸದ ಪಿಸಿಬಿ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್) ಕೇವಲ 24 ಗಂಟೆಗಳ ಒಳಗೆ ಸ್ಥಳದಲ್ಲಿಯೇ ತಯಾರಿಸಿ ಕೊಡಲಾಗುತ್ತದೆ. ಜತೆಗೆ, ಸರ್ಕ್ಯೂಟ್ ವಿನ್ಯಾಸ, ಬಿಸಿನೆಸ್ ಪ್ಲ್ಯಾನಿಂಗ್ ಮತ್ತು ಹಣ ಹೂಡಿಕೆದಾರರ ಮುಂದೆ ಪ್ರದರ್ಶಿಸುವ ತರಬೇತಿ ಕಾರ್ಯಾಗಾರಗಳು ನಡೆಯಲಿವೆ. ಕಾರ್ಯಕ್ರಮದ ಕೊನೆಯಲ್ಲಿ ಈ ಆವಿಷ್ಕಾರಗಳನ್ನು ಸಾರ್ವಜನಿಕರಿಗೆ ‘ಸೈನ್ಸ್ ಗ್ಯಾಲರಿ’ ಶೈಲಿಯಲ್ಲಿ ಪ್ರದರ್ಶಿಸಲಾಗುತ್ತದೆ.
ಬಹುಮಾನ ಎಷ್ಟು?:
ಈ ಹ್ಯಾಕಥಾನ್‌ನ ಒಟ್ಟು ಬಹುಮಾನದ ಮೊತ್ತ ₹2,00,000 ರೂಪಾಯಿಯಾಗಿದ್ದು,ಪ್ರಥಮ ಬಹುಮಾನ ₹1,00,000, ದ್ವಿತೀಯ ₹60,000 ಮತ್ತು ತೃತೀಯ ₹40,000 ವನ್ನು ಒಳಗೊಂಡಿದೆ. ಇದರ ವಿಶೇಷತೆ ಏನೆಂದರೆ, ತೀರ್ಪುಗಾರರಾಗಿ ಪ್ರಸಿದ್ಧ ವೆಂಚರ್ ಕ್ಯಾಪಿಟಲಿಸ್ಟ್‌ಗಳು (VCs) ಮತ್ತು ಏಂಜೆಲ್ ಹೂಡಿಕೆದಾರರು ಇರುತ್ತಾರೆ. ವಿಜೇತ ತಂಡಗಳಿಗೆ ಕೇವಲ ಬಹುಮಾನ ಮಾತ್ರವಲ್ಲ, ತಮ್ಮ ಐಡಿಯಾಗಳಿಗೆ ನೈಜ ಬಂಡವಾಳ ಮತ್ತು ಮಾರ್ಕೆಟ್ ಮೌಲ್ಯೀಕರಣ ಪಡೆಯುವ ದೊಡ್ಡ ಅವಕಾಶ ಸಿಗಲಿದೆ.
ನೀವು ಪಿಸಿಬಿ ವಿನ್ಯಾಸಕರಾಗಿರಲಿ, ಎಂಬೆಡೆಡ್ ಎಂಜಿನಿಯರ್ ಆಗಿರಲಿ ಅಥವಾ ಹೊಸದನ್ನು ಕಲಿಯಲು ಉತ್ಸುಕರಾಗಿರುವ ಡಿಐವೈ (DIY) ಮೇಕರ್ ಆಗಿರಲಿ, ಈ ಕಾರ್ಯಕ್ರಮ ನಿಮಗೆ ಹೇಳಿ ಮಾಡಿಸಿದಂತಿದೆ. ನಿಮ್ಮ ‘ಮಂಗಳ ಮಿಷನ್’ ಐಡಿಯಾಗಳನ್ನು ನೈಜ ಹಾರ್ಡ್‌ವೇರ್ ಆಗಿ ಪರಿವರ್ತಿಸಲು, hack.pcbcupid.com ಈ ಲಿಂಕ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಮಂಗಳ ಗ್ರಹದತ್ತ ಮಾನವನ ಪ್ರಯಾಣವು ಸವಾಲಿನಿಂದ ಕೂಡಿದ್ದರೂ ಅದು ಅತ್ಯಮೂಲ್ಯವಾದುದು. ಈ ಸಾಧನೆ ನೆಮ್ಮೆಲ್ಲರ ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಮಂಗಳನಲ್ಲಿ ವಿಜ್ಞಾನ ಕೇಂದ್ರವನ್ನು ನಿರ್ಮಿಸುವ ಪರಮ್ ಸಂಸ್ಥೆಯ ದೃಷ್ಟಿಕೋನಕ್ಕೆ ಈ ಹ್ಯಾಕಥಾನ್ ಮೊದಲ ಹೆಜ್ಜೆಯಾಗಿದೆ ಎಂದು ಪರಮ್ ಸೈನ್ಸ್‌ನ ನಿರ್ದೇಶಕ ಇನವಂಶಿ ಇನಗಂಟಿ ತಿಳಿಸಿದ್ದಾರೆ.








