ಬೆಂಗಳೂರು: ಕೈಮಗ್ಗ ನೇಕಾರರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತರ ಕುಟುಂಬದವರಿಗೆ ರೂ 5 ಲಕ್ಷ ಪರಿಹಾರ ವಿತರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ವಿಧಾನಪರಿಷತ್ತಿಗೆ ಭರವಸೆ ನೀಡಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರಾದ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಭಿಮಾ ಯೋಜನೆಯಲ್ಲಿ ರೂ 2 ಲಕ್ಷ ಪರಿಹಾರ ವಿತರಣೆ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯ ವಿಮಾ ಕಂತನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಈ ರೂ 2 ಲಕ್ಷ ಗಳೊಂದಿಗೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ರೂ 3 ಲಕ್ಷ ಪರಿಹಾರ ವಿತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿತರಣೆ ಮಾಡುವ ಯೋಜನೆ ಜಾರಿಯಲ್ಲಿ ಇರಲಿಲ್ಲ. ಆದರೆ ಕೋವಿಡ್ ಅವಧಿಯಲ್ಲಿ 25 ಮೃತ ನೇಕಾರರ ಕುಟುಂಬಗಳಿಗೆ ತಲಾ ರೂ 5 ಲಕ್ಷಗಳಂತೆ ರೂ 1.25 ಕೋಟಿ ಪರಿಹಾರ ವಿತರಿಸಲಾಗಿದೆ. ಈ ಪರಿಹಾರ ವಿತರಣೆ ಯೋಜನೆ ಮುಂದುವರಿಕೆಗೆ ಆರ್ಥಿಕ ಇಲಾಖೆ ಅನುಮೋದನೆಗೆ ಪ್ರಯತ್ನಿಸಲಾಗುವುದು ಎಂದರು.
ಆತ್ಮಹತ್ಯೆ ಮಾಡಿಕೊಂಡ ನೇಕಾರನ ಪತ್ನಿಗೆ ಪಿಂಚಣಿ ಅಥವಾ ಮೃತರ ಮಕ್ಕಳಿಗೆ ಉಚಿತಿ ಶಿಕ್ಷಣ ನೀಡುವ ಯೋಜನೆ ಇಲ್ಲ. ಆದರೆ ರೂ 2,500ಗಳಿಂದ ರೂ 11,000ಗಳವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 2022-23ನೇ ಸಾಲಿನಲ್ಲಿ 3,664 ವಿದ್ಯಾರ್ಥಿಗಳಿಗೆ ರೂ 1.63 ಕೋಟಿ ಹಾಗೂ 2023-24ನೇ ಸಾಲಿನಲ್ಲಿ 3,689 ವಿದ್ಯಾರ್ಥಿಗಳಿಗೆ ರೂ 1.99 ಕೋಟಿ ವಿದ್ಯಾರ್ಥಿ ವೇತನವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದರು.
BIG NEWS: ಮಾ.22ರಂದು ‘ಅಖಂಡ ಕರ್ನಾಟಕ ಬಂದ್’: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ | Karnataka Bandh 2025
BREAKING : ಮಾ.22 ರಂದು ‘ಅಖಂಡ ಕರ್ನಾಟಕ ಬಂದ್’ : ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ