ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಪ್ರಮುಖ ರಸ್ತೆ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರು ಹೆಚ್ಚಾಗಿದೆ. ವಾಹನ ಸವಾರರು ಓಡಾಡೋದಕ್ಕೆ ಕಷ್ಟವಾಗಿದೆ. ರಾಜ್ಯದ ಜನರಿಗೆ ಆಸೆ, ಆಮೀಷದ ಬಲಿಯೊಡ್ಡಿ ಅಭಿವೃದ್ಧಿ ಶೂನ್ಯ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿರೋಧಿ ನೀತಿ ಅನುಸರಿಸುತ್ತದೆ ಎಂದು ಬಿಜೆಪಿ ಮುಖಂಡ ಡಾ.ಜ್ಞಾನೇಶ್ ಆರೋಪಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ಸಾಗರ, ಉಳವಿ ಮುಖ್ಯ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಿಟ್ಟಿ ಯೋಜನೆಯಿಂದ ರಾಜ್ಯದ ಆರ್ಥಿಕತೆ ಹಳಿ ತಪ್ಪಿದೆ. ಖಜಾನೆಯಲ್ಲಿ ಹಣವಿಲ್ಲ. ಅಭಿವೃದ್ಧಿ ಕುಂಠಿತಗೊಂಡಿದೆ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಖಜಾನೆ ಲೂಟಿ ಮಾಡಿದೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.
ಕೇಂದ್ರದಲ್ಲೂ ಒಂದೊಮ್ಮೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದರೆ ಇವತ್ತಿನ ದೇಶ ಸ್ಥಿತಿ ಹೇಗಿರುತಿತ್ತು ಎನ್ನುವುದನ್ನು ಜನರು ಯೋಚಿಸಬೇಕಿದೆ ಎಂದರು.
ರಸ್ತೆಯಲ್ಲಿ ಗುಂಡಿಗಳು ಬಿದ್ದು ವರ್ಷ ಕಳೆದರೂ ಮಳೆಗಾಲದ ನೆಪ ಹೇಳಿ ಮುಂದೂಡುತ್ತಿದ್ದಾರೆ. ಜನರ ತೆರಿಗೆ ಹಣದಲ್ಲಿ ಅಭಿವೃದ್ಧಿ ಮಾಡಲು ನಿಮಗೇನು ಕಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಲು ಜಾತಿ ಗಣತಿಗೆ ಮುಂದಾಗಿದ್ದಾರೆ.ಅಭಿವೃದ್ಧಿ ಮಾಡಲು ಮನಸ್ಸು ಇಲ್ಲವಾದರೆ
ಅಧಿಕಾರ ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಿರಿಯ ಮುಖಂಡ ದೇವೇಂದ್ರಪ್ಪ ಚನ್ನಾಪುರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕೇಂದ್ರ ಸರ್ಕಾರ ಇಳಿಸಿರುವ ಜಿಎಸ್ ಟಿ ತೆರಿಗೆಯನ್ನು ಸಾರ್ವಜನಿಕ ಹಣ ಅದು ಯಾರಪ್ಪನದ್ದಲ್ಲ ಎಂದು ರೋಷಾವೇಷವಾಗಿ ಹೇಳುತ್ತಾರೆ. ನೀವೂ ಕೂಡ ರಾಜ್ಯದ ಜನರು ಕಟ್ಟಿದ ತೆರಿಗೆ ಹಣದಿಂದಲೇ ರಸ್ತೆಗಳ ಗುಂಡಿ ಮುಚ್ಚಿಸಿ ಎಂದು ಸವಾಲು ಹಾಕಿದರು.
ಸೊರಬದಲ್ಲಿ ಸಾಗರ-ಉಳವಿ ರಸ್ತೆ ತಡೆ ನಡೆಸಿ ಬಿಜೆಪಿಯಿಂದ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ನಡೆದಂತ ಪ್ರತಿಭಟನೆಯ ಕಾರಣದಿಂದಾಗಿ ಅರ್ಧ ಗಂಟೆಗೂ ಹೆಚ್ಚು ಸಮಯ ವಾಹನ ದಟ್ಟಣೆ ಉಂಟಾಗಿತ್ತು.
ಈ ಪ್ರತಿಭಟನೆ ವೇಳೆ ಸೊರಬ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಜಾನಕಪ್ಪ ಯಲಸಿ, ಸುರೇಶ್ ಉದ್ರಿ, ಮುಖಂಡರಾದ ಕೀರ್ತಿರಾಜ್ ಕಾನಹಳ್ಳಿ, ಯೋಗೇಶ್, ಸಂಜಯ್, ದೇವೇಂದ್ರಪ್ಪ ಚನ್ನಾಪುರ, ಕನಕದಾಸ, ಮಂಜಪ್ಪ ಕರಡಿಗೇರಿ, ಯಶೋಧರ, ಸಂದೀಪ ಮಳಲಗದ್ದೆ, ಷಡಾಕ್ಷರಿ, ಮಂಜುನಾಥ್ ಹುರುಳಿ ಇದ್ದರು.
ವರದಿ; ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ
BREAKING: ಹಿರಿಯ ಸಾಹಿತಿ ಎಸ್‌ಎಲ್ ಭೈರಪ್ಪ ಇನ್ನಿಲ್ಲ | SL Bhyrappa is no more
ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಅರೆಸ್ಟ್: ವರದಿ | Pahalgam Attack