ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳ ವ್ಯಸನವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಸಮಗ್ರ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದು, ಸಾರ್ವಜನಿಕರ ಅಭಿಪ್ರಾಯ ಪಡೆದ ನಂತರ ಅಂತಿಮ ನೀತಿಯನ್ನು ಪ್ರಕಟಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸುವಂತೆ ಮಾಡಲು ಶಿಕ್ಷಕರಿಗೆ ತರಬೇತಿ, ಪೋಷಕರಲ್ಲಿ ಜಾಗೃತಿ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕರಡು ನೀತಿಯನ್ನು ರೂಪಿಸಲಾಗಿದೆ ಎಂದರು.
ಆರೋಗ್ಯ ಇಲಾಖೆ, ಪ್ರಾಥಮಿಕ ಶಿಕ್ಷಣ ಇಲಾಖೆ ಮತ್ತು ನಿಮ್ಹಾನ್ಸ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದ ಪ್ರಕಾರ, ಶಾಲಾ-ಕಾಲೇಜುಗಳಲ್ಲಿನ ಪ್ರತಿ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರು ಡಿಜಿಟಲ್ ಸಂವಹನ ಅಥವಾ ಮೊಬೈಲ್ ಬಳಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡುಬಂದಿದೆ.
ದುಷ್ಪರಿಣಾಮಗಳು
ಅತಿಯಾದ ಡಿಜಿಟಲ್ ಬಳಕೆಯಿಂದ ಮಕ್ಕಳಲ್ಲಿ ಉದ್ವೇಗ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ ಮತ್ತು ಸಾಮಾಜಿಕವಾಗಿ ಪ್ರತ್ಯೇಕವಾಗಿರುವ (Isolation) ಮನೋಭಾವ ಬೆಳೆಯುತ್ತಿದೆ ಎಂದು ಅಧ್ಯಯನವು ಎಚ್ಚರಿಸಿದೆ.ಆರಂಭಿಕ ಹಂತದಲ್ಲೇ ಮಕ್ಕಳಲ್ಲಿ ಕಂಡುಬರುವ ಡಿಜಿಟಲ್ ವ್ಯಸನದ ಲಕ್ಷಣಗಳನ್ನು ಪತ್ತೆಹಚ್ಚಿ, ಅವರಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರ ಅಭಿಪ್ರಾಯಕ್ಕೆ ಮುಕ್ತ ಅವಕಾಶ
ಸರ್ಕಾರ ಸಿದ್ಧಪಡಿಸಿರುವ ಈ ಕರಡು ನೀತಿಯು ಆರೋಗ್ಯ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. ಸಾರ್ವಜನಿಕರು, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಲಹೆಗಳನ್ನು ನೀಡಲು ಕೋರಲಾಗಿದೆ.
ವೆಬ್ಸೈಟ್: hfwcom.karnataka.gov.in
ಇ-ಮೇಲ್ ವಿಳಾಸಗಳು: dd6mhkar@gmail.com, ddehospital&hfws@karnataka.gov.in
ಗಡುವು: ಸಾರ್ವಜನಿಕರು ಮುಂದಿನ 15 ದಿನಗಳ ಒಳಗಾಗಿ ತಮ್ಮ ಅಭಿಪ್ರಾಯ ಮತ್ತು ಸೂಚನೆಗಳನ್ನು ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ.
ಸಾರ್ವಜನಿಕರಿಂದ ಬರುವ ಸಲಹೆಗಳನ್ನು ಪರಿಶೀಲಿಸಿ, ವೈಜ್ಞಾನಿಕವಾಗಿ ಚರ್ಚಿಸಿ ಶೀಘ್ರದಲ್ಲೇ ಅಂತಿಮ ಮಾರ್ಗಸೂಚಿಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.








