ದಾವಣಗೆರೆ : ಜಾತಿ ವ್ಯವಸ್ಥೆ ಬೇರೂರಲು ವೈಚಾರಿಕ ಶಿಕ್ಷಣದ ಕೊರತೆ ಕಾರಣ. ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನ ಸ್ಥಗಿತಗೊಳಿಸೋದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ದಾವಣಗೆರೆಯಲ್ಲಿ ಜಗದ್ಗುರು ಶ್ರೀ ಡಾ: ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಪಟ್ಟಾಭಿಷೇಕ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಭಗೀರಥ ಮಹೋತ್ಸವ ಹಾಗೂ ಉಪ್ಪಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಚಲನರಹಿತವಾದ ಜಾತಿ ವ್ಯವಸ್ಥೆ ಬಲವಾಗಿ ಬೇರು ಬಿಟ್ಟಿರುವುದರಿಂದ ಬದಲಾವಣೆ ತರಲು ಇಂದಿಗೂ ಸಾಧ್ಯವಾಗಿಲ್ಲ. ದಾರ್ಶನಿಕರ ಪ್ರಯತ್ನದಿಂದಾಗಿ ಸ್ವಲ್ಪ ಸರಿಹೋಗುವ ಜಾತಿ ವ್ಯವಸ್ಥೆ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ. ಬಸವಾದಿ ಶರಣರು’ ಇವನಾರವ, ಎನ್ನದೇ ಇವ ನಮ್ಮವ ಎಂದು ಭಾವಿಸುವಂತೆ ಹೇಳಿದ್ದರು ಎಂದರು.
ಆರ್ಥಿಕ, ಸಮಾಜಿಕ ಅಸಮಾನತೆ ನಮ್ಮ ದೇಶದ ಜಾತಿ ವ್ಯವಸ್ಥೆ ಕಾರಣ
ಉಪ್ಪಾರರು ಆರ್ಥಿಕವಾಗಿ , ಸಮಾಜಿಕವಾಗಿ ಹಿಂದುಳಿದಿರುವ ಸಮಾಜ. ಉಪ್ಪು ತಯಾರಿಸಿ ಮಾರಾಟ ಮಾಡುವ ವೃತ್ತಿಯಾಗಿದ್ದು, ಕೈಗಾರೀಕರಣವಾದ ನಂತರ ಅವರ ವೃತ್ತಿ ಬಿಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇವರ ಕಸುಬಿಗೆ ಧಕ್ಕೆಯುಂಟಾದ ಮೇಲೆ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಶಿಕ್ಷಣ, ಆರ್ಥಿಕ ಶಕ್ತಿಯಿಂದ ವಂಚಿತರಾಗಿ ಉದ್ಯೋಗವಿಲ್ಲದೇ ಕೂಲಿ ಮಾಡುವ ಸ್ಥಿತಿ ಉಂಟಾಯಿತು. ಆದರೆ ಉಪ್ಪಾರ ಸಮಾಜ ಮಹಾತ್ಮಾ ಗಾಂಧಿಜಿಯವರು ಬ್ರಿಟಿಷರ ವಿರುದ್ಧ ಹೋರಾಡುವಾಗ ಉಪ್ಪಿನ ಸತ್ಯಾಗ್ರಹ ಮಾಡಿದರು ಅದರಲ್ಲಿ ಉಪ್ಪಾರರ ಕೊಡುಗೆಯೂ ಅಪಾರವಾಗಿತ್ತು ಎಂದರು.
ಜಾತಿ ವ್ಯವಸ್ಥೆಯ ಕಾರಣದಿಂದ ಅಕ್ಷರ ಸಂಸ್ಕೃತಿಯಿಂದ ಎಲ್ಲಾ ಶೂದ್ರರೂ ವಂಚಿತರಾಗಿದ್ದಾರೆ. ಆರ್ಥಿಕ, ಸಮಾಜಿಕ ಅಸಮಾನತೆ ಇದ್ದರೆ ಅದಕ್ಕೆ ನಮ್ಮ ದೇಶದ ಜಾತಿ ವ್ಯವಸ್ಥೆ ಕಾರಣ. ಸಂವಿಧಾನದಲ್ಲಿ ಸಮ ಸಮಾಜ ನಿರ್ಮಾಣವಾಗಬೇಕೆಂದು ಹೇಳಿದೆ. ಶೋಷಣೆಗೊಳಗಾದ ಜನರಿಗೆ ಆರ್ಥಿಕ, ಸಮಾಜಿಕ ಶಕ್ತಿ ತುಂಬಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದರು.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ನಾರಾಯಣಗುರು
ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ವಿರೋಧಿಸಿದರು. ನನಗೆ ಕಾನೂನು ಶಿಕ್ಷಣ ಪಡೆದು, ವಕೀಲನಾಗಿ, ಈಗ ಮುಖ್ಯಮಂತ್ರಿಯಾಗುವ ಅವಕಾಶವನ್ನು ಅಂಬೇಡ್ಕರ್ ರವರ ಸಂವಿಧಾನ ನೀಡಿತು. ಶ್ರೀಮಠವು ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಇಂಬು ನೀಡುತ್ತಿರುವುದು ಶ್ಲಾಘನೀಯ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ನಾರಾಯಣಗುರುಗಳು ಬೋಧಿಸಿದರು. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು ಎಂದು ಬಸವಣ್ಣನವರು ಪ್ರತಿಪಾದಿಸಿದರು ಎಂದರು.
ಶ್ರೇಷ್ಠತೆ ಜಾತಿಯಿಂದಲ್ಲ, ಶಿಕ್ಷಣದಿಂದ ಬರುತ್ತದೆ
ಸಮುದಾಯಗಳು ಸೂಕ್ತರೀತಿಯಲ್ಲಿ ಅಭಿವೃದ್ದಿಹೊಂದಬಾರದೆಂಬ ಉದ್ದೇಶದಿಂದ ದಾರಿ ತಪ್ಪುಸುವವರು ಬಹಳಷ್ಟಿದ್ದಾರೆ. ಚರಿತ್ರೆ ತಿಳಿದಿರುವವರು ಮಾತ್ರ ಭವಿಷ್ಯ ನಿರ್ಮಿಸಲು ಸಾಧ್ಯ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ತುಂಬಿದಾಗ ಮಾತ್ರ ದೇಶಕ್ಕೆ ಬಂದ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಶ್ರೇಷ್ಠತೆ ಎಂಬುದು ಜಾತಿಯಿಂದ ಬರುವುದಲ್ಲ. ಅದು ನಮ್ಮ ಶಿಕ್ಷಣ,ಪರಿಶ್ರಮದಿಂದ ಬರುತ್ತದೆ ಎಂದರು.
ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ಸ್ಥಗಿತವಾಗುವುದಿಲ್ಲ
ತಳಮಟ್ಟದ ಜನರಿಗೆ ಉಪಯೋಗವಾಗುವ ಗ್ಯಾರಂಟಿ ಯೋಜನೆಗಳನ್ನು ಕೆಲವರು ಟೀಕಿಸಿದರು. ಆದರೆ ರಾಜ್ಯದ 150 ಕೋಟಿ ಮಹಿಳೆಯರು ಜೂನ್ 11 ರಿಂದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇಂತಹ ಜನಪರ ಯೋಜನೆಗಳ ಬಗ್ಗೆ ಇಚ್ಛಾಶಕ್ತಿ ತೋರದ ಪಕ್ಷಗಳು, ಮೊದಲಿಗೆ ಯೋಜನೆಗಳನ್ನು ಜಾರಿ ಮಾಡಿ ನಂತರ ಸ್ಥಗಿತಗೊಳಿಸುತ್ತಾರೆ ಎಂದು ಟೀಕಿಸುತ್ತಾರೆ.ಆದರೆ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ರಾಜ್ಯದ 4.5 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ ಎಂದರು.
ಭರವಸೆ
ಉಪ್ಪಾರ ಸಮಾಜಕ್ಕೆ ಜಗದ್ಗುರು ಶ್ರೀ ಡಾ: ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಬಹಳಷ್ಟು ಕೆಲಸಗಳನ್ನು ಮಾಡಿದ್ದು, ಸರ್ಕಾರದ ವತಿಯಿಂದ ಭಗೀರಥ ಜಯಂತಿ ಆಚರಣೆ ಹಾಗೂ ಭಗೀರಥ ಮಂಡಳಿ ಸ್ಥಾಪನೆಯಾಗಿದ್ದರೆ ಅದಕ್ಕೆ ಸ್ವಾಮೀಜಿಯವರು ಕಾರಣ ಎಂದರು. ಸಂಸ್ಥೆಗೆ ಸ್ವಾಮೀಜಿಗಳ ಜಮೀನು ಕೊಡಬೇಕೆಂಬ ಮನವಿಗೆ ಸ್ಪಂದಿಸಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಉಭರವಸೆ ನೀಡಿದರು.
ಜಗದ್ಗುರು ಶ್ರೀ ಡಾ: ಪುರುಷೋತ್ತಮಾನಂದಪುರಿ ಮಹಾಸ್ವಾಮಿ, ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವರು ಹಾಗೂ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಸಚಿವರಾ ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕೀಹೊಳಿ, ಉಸ್ತುವಾರಿ ಸಚಿವ ಡಾ: ಕೆ. ಸುಧಾಕರ್, ಶಾಸಕರಾದ ಗೋವಿಂದಪ್ಪ, ಶ್ರೀನಿವಾಸ್, ಪುಟ್ಟಸ್ವಾಮಿ ಗೌಡ, ಮಾಜಿ ಸಂಸದ ಚಂದ್ರಪ್ಪ, ಉಪ್ಪಾರ ಸಮಾಜದ ಮುಖಂಡರು, ಸಾಲುಮರದ ತಿಮ್ಮಕ್ಕ ಉಪಸ್ಥಿತರಿದ್ದರು.
‘IPS’ ಹುದ್ದೆಗೆ ‘ಪ್ರತಾಪ್ ರೆಡ್ಡಿ’ ರಾಜೀನಾಮೆ: ನಿವೃತ್ತಿಗೆ 2 ತಿಂಗಳು ಬಾಕಿ ಇರುವಾಗಲೇ ‘ಗುಡ್ ಬೈ’