ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸಬಾರದು ಮತ್ತು ಖಾಸಗಿಯವರಿಗೆ ನೀಡಬಾರದು ಎಂಬುದಾಗಿ ಅರ್ಚಕ ಸಮೂಹ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದೆ. ಜೊತೆ ಜೊತೆಗೆ ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳಿತು.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ(ರಿ)ಯಿಂದ ಬೃಹತ್ ಸಮಾವೇಶವನ್ನು ನಡೆಸಲಾಯಿತು. ಈ ಸಮಾವೇಶದಲ್ಲಿ ಮುಜರಾಯಿ ಸಚಿವರಾಗಿ ರಾಮಲಿಂಗಾ ರೆಡ್ಡಿ ಅವರ ಕಾರ್ಯವೈಖರಿಯನ್ನು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅರ್ಚಕ ಸಮೂಹ ಹಾಡಿ ಹೊಗಳಿದರು.
ಈ ಒಕ್ಕೂಟದ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಎ, ಬಿ ಮತ್ತು ಸಿ ವರ್ಗದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿ ಸದಾ ಅವರ ಏಳಿಗೆಗಾಗಿ ಸುಮಾರು 50 ವರ್ಷಗಳಿಂದ ಸರ್ಕಾರದೊಡನೆ ಹೋರಾಡುತ್ತಿರುವ ಹಿಂದು ಧಾರ್ಮಿಕ ಸರ್ವ ಸಮಾಜದ ದೇವಾಲಯಗಳ ನೌಕರರನ್ನು ಒಳಗೊಂಡಿರುವ ಸಂಸ್ಥೆಯಾಗಿರುತ್ತದೆ. ನೆನ್ನೆಯ ಸಮಾವೇಶದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಅರ್ಚಕರುಗಳು ಕಿಕ್ಕಿರಿದು ನೆರೆದಿದ್ದರು.
ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ ನಮ್ಮ ಮುಜರಾಯಿ ಇಲಾಖೆಯಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿರುವುದು ಒಳ್ಳೆಯ ಶುಭ ಸಂಕೇತ ಎಂಬುದಾಗಿ ಸಮಾವೇಶದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕೊಂಡಾಡಲಾಯಿತು.
ರಾಮಲಿಂಗಾ ರೆಡ್ಡಿಯವರಿಗೆ ಯಾವುದೇ ಖಾತೆ ನೀಡಲಿ, ಆದರೆ ಮುಜರಾಯಿ ಖಾತೆಯೂ ಆ ಖಾತೆಯೊಂದಿಗೆ ಇರಬೇಕು. ಇನ್ನು ಕನಿಷ್ಠ 10 ವರ್ಷಗಳ ಅವಧಿಗೆ ಅವರು ಮುಜರಾಯಿ ಸಚಿವರಾಗಿರಬೇಕು ಇದು ನಮ್ಮ ಅಭಿಲಾಷೆ ಹಾಗೂ ಕೂಗು ಎಂದು ಒಕ್ಕೊರಲಿನಿಂದ ಅರ್ಚಕರ ಸಮಾವೇಶದಲ್ಲಿ ಹೇಳಲಾಯಿತು.
ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸಬಾರದು ಅಥವಾ ಖಾಸಗಿಯವರಿಗೆ ನೀಡಬಾರದು. ಅದಕ್ಕೆ ನಮ್ಮ ವಿರೋಧವಿದೆ. ಖಾಸಗಿಯವರು ವ್ಯಾಪಾರದ ದೃಷ್ಟಿಯಿಂದ ಅಷ್ಟೇ ದೇವಸ್ಥಾನವನ್ನು ನೋಡುತ್ತಾರೆ. ಧರ್ಮವನ್ನು ಉಳಿಸುವ ಅಥವಾ ದೇವರ ಸೇವೆಯನ್ನು ಮಾಡುವ ನಮ್ಮಂತಹ ಅರ್ಚಕರ ಬಗ್ಗೆ ಅವರಿಗೆ ಯಾವುದೇ ಕನಿಕರವಿರುವುದಿಲ್ಲ. ನಮಗಾಗಿ ಯಾವುದೇ ಯೋಜನೆಗಳನ್ನು ತರುವ ಪ್ರಯತ್ನ ಕೂಡ ನಡೆಯುವುದಿಲ್ಲ ಎಂಬುದಾಗಿಯೂ ತಿಳಿಸಲಾಯಿತು.
ರಾಜ್ಯದಲ್ಲಿರುವ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ, 34,166 ಸಿ ವರ್ಗದ ದೇವಾಲಯಗಳಿದ್ದು, ಮಾನ್ಯ ರಾಜ್ಯಪಾಲರು ಕಾಯ್ದೆಗೆ ಅನುಮೋದನೆ ನೀಡಿದ ಕೂಡಲೇ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ದಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ದಿಗೆ ಹಣ ವಿನಿಯೋಗಿಸಲು ತುಂಬಾ ಅನುಕೂಲವಾಗುತ್ತದೆ.
ಇಲ್ಲಿಯವರೆಗೆ ಬಡ ಅರ್ಚಕರುಗಳ ಬಗ್ಗೆ ಯಾರೋಬ್ಬರೂ ಕಾಳಜಿವಹಿಸಿರಲಿಲ್ಲ. ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಹಾಗೂ ಕಾಳಜಿ ಪರ ನಡೆಯು ಫಲವಾಗಿ ಮಸೂದೆಯು ನಮಗೊಂದು ಭರವಸೆ ಮೂಡಿಸಿದೆ. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವುದು ನಮ್ಮಂತಹ ಸಹಸ್ರಾರು ಅರ್ಚಕರು/ನೌಕರರ ಪಾಲಿಗೆ ನೋವುಂಟು ಮಾಡಿದೆ. ವಿರೋಧ ಪಕ್ಷದವರಾದ ಬಿ.ಜೆ.ಪಿ ಅವರು ಹಿಂದೂ ಧರ್ಮವನ್ನು ಉಳಿಸುವವರು ನಾವು ಎಂದು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು, ದೇವಸ್ಥಾನ ಅಲ್ಲಿನ ಅರ್ಚಕರ ಉಳಿತಿಗಾಗಿ ತಂದಿರುವ ಈ ಕಾಯಿದೆಯನ್ನು ಬೆಂಬಲಿಸುವಂತಹ ಕಾರ್ಯಮಾಡಬೇಕು. ಪಕ್ಷ ಯಾವುದೇ ಇರಲಿ ಧರ್ಮ, ದೇವಸ್ಥಾನ, ಭಕ್ತಾದಿಗಳ ಭಾವನೆಯೊಂದಿಗೆ ರಾಜಕೀಯ ಬೆರಸಬಾರದು ಎಂದು ಬಿ.ಜೆ.ಪಿ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದಂತ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ರಾಜ್ಯಪಾಲರು ಶೀಘ್ರದಲ್ಲಿಯೇ ಸದರಿ ಮಸೂದೆಗೆ ಅಂಕಿತ ಹಾಕುವ ಭರವಸೆ ಇದೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಗ್ಯಾರಂಟಿ ಅನುಷ್ಠಾನಸಮಿತಿಯ ಅಧ್ಯಕ್ಷರಾದಂತ ಎಚ್.ಎಂ.ರೇವಣ್ಣ, ಸಚಿವ ದಿನೇಶ್ ಗುಂಡೂರಾವ್, ಗೌರವ ಪ್ರಧಾನ ಸಲಹೆಗಾರ ಪ್ರೊ।। ಡಾ॥ ರಾಧಾಕೃಷ್ಣ ಕೆ.ಇ., ಡಾ। ಎಸ್.ಆರ್. ಶೇಷಾದ್ರಿ, ಭಟ್ಟರ್, ಗೌರವ ಉಪಾಧ್ಯಕ್ಷರು, ಡಾ॥ ಕೆ.ಎಸ್.ಎನ್. ದೀಕ್ಷಿತ್, ಮುಖ್ಯ ಪ್ರಧಾನ ಕಾರ್ಯದರ್ಶಿ, ಟಿ.ಕೆ. ಶಾಮಸುಂದರ್, ದೀಕ್ಷಿತ್, ಸಹ ಕಾರ್ಯದರ್ಶಿ, ಕೆ.ಎಸ್. ಉಮೇಶ್ ಶರ್ಮ, ಸಂಘಟನಾ ಕಾರ್ಯದರ್ಶಿ, ಹೆಚ್.ಎಸ್. ರಂಗರಾಜನ್, ಸಂಘಟನಾ ಕಾರ್ಯದರ್ಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಡ್ಡಾ, ಪ್ರಹ್ಲಾದ್ ಜೋಷಿ ಸೇರಿ ಸಿ.ಪಿ.ಯೋಗೇಶ್ವರಗೆ ಜೆಡಿಎಸ್ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ: HDK
ಸಂಸದ ಇ.ತುಕಾರಾಂ ಅನರ್ಹತೆಗೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ: ಬಿ.ವೈ.ವಿಜಯೇಂದ್ರ
ನಡ್ಡಾ, ಪ್ರಹ್ಲಾದ್ ಜೋಷಿ ಸೇರಿ ಸಿ.ಪಿ.ಯೋಗೇಶ್ವರಗೆ ಜೆಡಿಎಸ್ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ: HDK