ನವದೆಹಲಿ:ಪ್ರಸಿದ್ಧ ರಾಪರ್‌ಗಳಾದ ಯೋ ಯೋ ಹನಿ ಸಿಂಗ್ ಮತ್ತು ಬಾದ್‌ಶಾ ಅವರ ಸುಮಾರು 20 ವರ್ಷಗಳ ಹಳೆಯದಾದ ‘ವಾಲ್ಯೂಮ್ 1’ (Volume 1) ಹಾಡಿನ ವಿರುದ್ಧ ದೆಹಲಿ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಈ ಹಾಡು “ಅತ್ಯಂತ ಅಶ್ಲೀಲವಾಗಿದ್ದು, ಮಹಿಳೆಯರ ಘನತೆಗೆ ಕುಂದು ತರುವಂತಿದೆ” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಇದನ್ನು ಎಲ್ಲಾ ಸಾಮಾಜಿಕ ಜಾಲತಾಣಗಳು ಮತ್ತು ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಿಂದ ತಕ್ಷಣವೇ ತೆಗೆದುಹಾಕುವಂತೆ (Takedown) ಕಟ್ಟುನಿಟ್ಟಿನ ಆದೇಶ ನೀಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು, “ಈ ಹಾಡಿನ ಸಾಹಿತ್ಯವು ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ. ಇದು ಕೇವಲ ಆಕ್ಷೇಪಾರ್ಹವಲ್ಲ, ಬದಲಾಗಿ ಮಹಿಳೆಯರನ್ನು ಕೇವಲ ಲೈಂಗಿಕ ವಸ್ತುವಿನಂತೆ ಬಿಂಬಿಸುವ ವಿಕೃತ ಮನಸ್ಥಿತಿಯನ್ನು ಹೊಂದಿದೆ,” ಎಂದು ಕಿಡಿಕಾರಿದ್ದಾರೆ.
ಶೀರ್ಷಿಕೆ ಬರೆಯಲೂ ಅಸಾಧ್ಯ: ಹಾಡಿನ ಶೀರ್ಷಿಕೆ ಮತ್ತು ಸಾಹಿತ್ಯ ಎಷ್ಟು ಅಶ್ಲೀಲವಾಗಿದೆ ಎಂದರೆ ಅದನ್ನು ನ್ಯಾಯಾಲಯದ ಅಧಿಕೃತ ಆದೇಶದ ಪ್ರತಿಯಲ್ಲಿ ದಾಖಲಿಸಲು ಕೂಡ ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸೂಚನೆ: ಈ ಹಾಡಿಗೆ ಸಂಬಂಧಿಸಿದ ಎಲ್ಲಾ ಯುಆರ್‌ಎಲ್ (URL) ಮತ್ತು ಲಿಂಕ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರಕ್ಕೆ ಮತ್ತು ಗೂಗಲ್, ಯೂಟ್ಯೂಬ್, ಸ್ಪಾಟಿಫೈ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಕಲೆ ಎಂದರೆ ಅಶ್ಲೀಲತೆಯಲ್ಲ: “ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಕಲೆಯ ಹೆಸರಿನಲ್ಲಿ ಸಮಾಜದ ಮೌಲ್ಯಗಳನ್ನು ಗಾಳಿಗೆ ತೂರಿ, ಮಹಿಳೆಯರನ್ನು ಅವಹೇಳನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ವಿಶೇಷವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಇಂತಹ ಹಾಡುಗಳು ಲಭ್ಯವಿರುವುದು ಅಪಾಯಕಾರಿ,” ಎಂದು ನ್ಯಾಯಾಲಯ ಎಚ್ಚರಿಸಿದೆ.








