ಬಾಗಲಕೋಟೆ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ತಂದಿರುವ ಗೃಹಲಕ್ಷ್ಮಿ ಯೋಜನೆಯು ಬಡವರ ಬದುಕಿಗೆ ಬಹಳಷ್ಟು ಅನುಕೂಲವಾಗಿದೆ. ಗೃಹಲಕ್ಷ್ಮಿ ಯೋಜನೆ ತಂದವರಿಗೆ ಪುಣ್ಯ ಬರಲಿ ಎಂದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ಗಂಗವ್ವ ಬಿರಾದಾರ ಆಶಿಸಿದ್ದಾರೆ.
ಮಾಧ್ಯಮಗಳೊಂದಿಗೆ ತಮ್ಮ ಸಂತಸ ಹಂಚಿಕೊಂಡಿರುವ ಗಂಗವ್ವ ಬಿರಾದಾರ ಅವರು, ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿರುವ ಸಚಿವೆ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಕೊರ್ತಿ ಗ್ರಾಮದ ಗಂಗವ್ವ ಬಿರಾದಾರ ಅವರು ಗೃಹಲಕ್ಷ್ಮಿ ಯೋಜನೆಯ ಒಟ್ಟು 12 ತಿಂಗಳ 24 ಸಾವಿರ ರೂಪಾಯಿ ಹಣವನ್ನು ಕೂಡಿಟ್ಟು, ಅದರಲ್ಲಿ 8 ಸಾವಿರ ರೂಪಾಯಿ ಹಣದಲ್ಲಿ ಮೊಮ್ಮಕ್ಕಳಿಗಾಗಿ ಹೊಲಿಗೆ ಯಂತ್ರ ಖರೀದಿಸಿದ್ದಾರೆ.
ಗಂಗವ್ವ ಬಿರಾದಾರ ಅವರು ಓದು ಬರಹ ಕಲಿತಿಲ್ಲ. ಆದರೆ, ಹೊಲಿಗೆ ತರಬೇತಿ ಪಡೆದಿದ್ದಾರೆ. ತನ್ನ ಮೊಮ್ಮಕ್ಕಳಿಗೆ, ನೆರೆಹೊರೆಯವರಿಗೆ ಹೊಲಿಗೆಯ ತರಬೇತಿ ನೀಡಿ ಅವರ ಭವಿಷ್ಯಕ್ಕೆ ಬೆಳಕಾಗಾಗಲಿ ಎಂದು ಹೊಲಿಗೆ ಯಂತ್ರ ಖರೀದಿಸಿದ್ದಾರೆ.
ಅಲ್ಲದೇ, 12 ಸಾವಿರ ರೂಪಾಯಿ ಹಣವನ್ನು ತನ್ನ ಮೊಮ್ಮಗನ ವಿದ್ಯಾಬ್ಯಾಸದ ಶುಲ್ಕ ಭರಿಸಲು ಹಾಗೂ ಉಳಿದ 4 ಸಾವಿರ ರೂಪಾಯಿಯನ್ನ ಕುಟುಂಬದ ನಿರ್ವಹಣೆಗೆ ಬಳಕೆ ಮಾಡಿದ್ದಾರೆ.
ಕಡುಬಡತನದ ನಡುವೆಯೂ ತನ್ನ ಮೊಮ್ಮಕ್ಕಳಿಗೆ, ನೆರೆಹೊರೆಯವರಿಗೆ ಸ್ವಾವಲಂಬಿ ಬದುಕು ರೂಪಿಸಿ ಕೊಡಲು ಮುಂದಾಗಿರುವ ಗಂಗವ್ವ ಬಿರಾದಾರ ಅವರ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗೃಹಲಕ್ಷ್ಮಿ ಯೋಜನೆಯಿಂದ ಇಂದು ನಮ್ಮಂತಹ ಲಕ್ಷಾಂತರ ಬಡ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ. ಸರಕಾರ ತಂದಿರುವ ಗ್ಯಾರಂಟಿ ಯೋಜನೆಗಳು ಬಹಳ ಉಪಯೋಗವಾಗುತ್ತವೆ. ಗೃಹಲಕ್ಷ್ಮಿ ಯೋಜನೆಯು ನಮ್ಮಂತಹ ಬಡವರ ಬದುಕಿಗೆ ಆಸರೆಯಾಗಿದೆ ಎಂದು ಗಂಗವ್ವ ಬಿರಾದಾರ ಹೇಳಿದ್ದಾರೆ.
ಗಂಗವ್ವ ಅವರ ಉದಾತ್ತ ಮನಸ್ಸಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಸ ವ್ಯಕ್ತಪಡಿಸಿ ಅವರಿಗೆ ಶುಭ ಹಾರೈಸಿದ್ದಾರೆ.
ಇದೇ ಸಂದರ್ಭದಲ್ಲಿ ಬಾಗಲಕೋಟೆಯ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯಲ್ಲಿ ಗಂಗವ್ವ ಅವರನ್ನು ಗೌರವಿಸಲಾಯಿತು.
ನಮ್ಮ ವಂಶಕ್ಕೆ ಕಣ್ಣೀರು ಬಳುವಳಿಯಾಗಿ ಬಂದಿದೆ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ