ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುತ್ತದೆ. ಮೂತನ ಕ್ವಾಟ್ರಾಸ್ ನಿರ್ಮಾಣಕ್ಕೂ ಅನುದಾನ ನೀಡಲಾಗುತ್ತದೆ. ಯಾವುದೇ ಸಮಸ್ಯೆ ಇದ್ದರೇ ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತಂತೆ ಕರೆದಿದ್ದಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದಂತ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ದೂಗೂರಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್ ಅವರು, ಉಳವಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕಾಗಿ ಸರ್ವೆ ಎಲ್ಲ ಮಾಡಿಸಲಾಗಿದೆ. ಸಾರಿಗೆ ಬಸ್ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಸೊರಬ ತಹಶೀಲ್ದಾರ್ ಮಂಜುಳಾ ಅವರು ತುಂಬಾನೇ ಒಲವು ತೋರಿದ್ದಾರೆ. ಇದಕ್ಕಾಗಿ ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಈ ಮನವಿಗೆ ಸಕಾರಾತ್ಮಕವಾಗಿಯೇ ಪ್ರತಿಸ್ಪಂದಿಸಿದಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ನಮ್ಮ ಸರ್ಕಾರ ಅನುದಾನ ಒದಗಿಸುವಲ್ಲಿ ಸಿದ್ಧವಿದೆ. ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೂ ಮಾತನಾಡಲಾಗಿದೆ. ಅವರು ಕೂಡ ಉಳವಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಒಲವು ತೋರಿದ್ದಾರೆ. ನೀವು ಎಲ್ಲಾ ಸಿದ್ಧ ಮಾಡಿ ಯಾವಾಗ ತಿಳಿಸುತ್ತಿರೋ ಆಗ ಅನುದಾನ, ನಿರ್ಮಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುವುದಾಗಿ ಭರವಸೆಯನ್ನು ನೀಡಿದರು.
ಇನ್ನೂ ಉಳವಿ ಬಸ್ ನಿಲ್ದಾಣ ನಿರ್ಮಾಣದ ಸ್ಥಳದಲ್ಲಿ ಮೂರು ಆಸ್ಪತ್ರೆಯ ಕ್ವಾಟ್ರಾಸ್ ಇದ್ದಾವೆ. ಅವುಗಳನ್ನು ತೆರವುಗೊಳಿಸಬೇಕಾಗುತ್ತಿದೆ. ಇದರಿಂದಾಗಿ ಅಲ್ಲಿರುವಂತ ಸ್ಟಾಫ್ ನರ್ಸ್ ಗಳಿಗೆ ಕ್ವಾಟ್ರಾಸ್ ಇಲ್ಲದಂತೆ ಆಗಿ ಸಮಸ್ಯೆ ಆಗಲಿದೆ. ಹೀಗಾಗಿ ಹೊಸಗಾಗಿ ಉಳವಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ವಸತಿ ಗೃಹ ನಿರ್ಮಾಣಕ್ಕೂ ಅನುದಾನ ನೀಡುವಂತೆ ಕೋರಿದರು. ಅಲ್ಲದೇ ಪ್ರತಿದಿನ ಆಸ್ಪತ್ರೆಗೆ 200 ರಿಂದ 300 ಮಂದಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಹೀಗಾಗಿ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆಸುವಂತೆಯೂ ಮನವಿ ಮಾಡಿದರು.
ಈ ವೇಳೆ ಮಾತನಾಡಿದಂತ ಸಚಿವ ಮಧು ಬಂಗಾರಪ್ಪ ಅವರು, ಉಳವಿ ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣಕ್ಕೆ ತಾನು ಬೇರೆ ಯಾವುದಾದರೂ ಅನುದಾನವನ್ನು ಒದಗಿಸುವುದಾಗಿ ತಿಳಿಸಿದರು. ಸರ್ಕಾರವು ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಕೋಟಾದಡಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ನನ್ನ ಕ್ಷೇತ್ರದಲ್ಲಿ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಅದನ್ನು ಮುಂದಿನ ದಿನಗಳಲ್ಲಿ ಭರ್ತಿ ಮಾಡಿ, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಉಳವಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿದ್ದಕ್ಕೆ ಉಳವಿ, ದೂಗೂರು, ಉಳವಿ ಗ್ರಾಮಸ್ಥರ ಪರವಾಗಿ ಫಯಾಸ್ ಅಹಮದ್ ಅವರು ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದಂತ ಮಧು ಬಂಗಾರಪ್ಪ ಅವರಿಗೆ ಧನ್ಯವಾದವನ್ನು ಸಲ್ಲಿಸಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದಂತ ಕೈಸೋಡಿ ಪ್ರಶಾಂತ್, ಕಾನಹಳ್ಳಿ ಚೆನ್ನಪ್ಪ, ಇಲಿಯಾಸ್, ನೂರ್ ಅಹಮದ್, ಮುಬಾರಕ್ ಸೇರಿದಂತೆ ಇತರರು ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..








