ಬೆಂಗಳೂರು: ಮನುಷ್ಯ ಪ್ರಗತಿ ಹೊಂದಲು ಅವನಲ್ಲಿ ಕುತೂಹಲ ಇರಬೇಕು, ಅಧ್ಯಯನದಿಂದ ಕುತೂಹಲಗಳಿಗೆ ಉತ್ತರ ದೊರಕುವುದರಿಂದ ಗ್ರಾಮೀಣ ಗ್ರಂಥಾಲಯಗಳನ್ನು ʼಅರಿವು ಕೇಂದ್ರʼಗಳೆಂದು ಹೆಸರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸಚಿವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ, ಪಂಚಾಯತ್ ರಾಜ್ ಆಯುಕ್ತಾಲಯದ ವತಿಯಿಂದ ಏರ್ಪಡಿಸಿದ್ದ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಪಗತಿ ಪರಿಶೀಲನೆ ಸಭೆ ನಡೆಸಿದರಲ್ಲದೆ ಅರಿವು ಕೇಂದ್ರಗಳ ಲೋಗೋ, ಪೋಸ್ಟರ್, ಕಟ್ಟಡ ವಿನ್ಯಾಸ, ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಮತ್ತು ಅರಿವು ಕೇಂದ್ರಗಳ ಚಟುವಟಿಕೆಗಳ ಸಂಪುಟಗಳ ಬಿಡುಗಡೆ ಕಾರ್ಯಕ್ರಮ ನೆರೆವೇರಿಸಿ ಮಾತನಾಡುತ್ತಿದ್ದರು. ರಾಜ್ಯದ ಪ್ರತಿಯೊಂದು ಅರಿವು ಕೇಂದ್ರಗಳ ಮಾಹಿತಿಯನ್ನು ಡಾಟಾಬೇಸ್ ಆಧರಿಸಿ ಸಂಗ್ರಹಿಸಲು ಸೂಚಿಸಲಾಗಿದೆ ಎಂದೂ ಸಚಿವರು ತಿಳಿಸಿದರು.
ಇಲ್ಲಿಯವರೆವಿಗೆ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಅಭಿವೃದ್ಧಿಯಲ್ಲಿ ಅಗಾಧವಾದ ಸಾಧನೆಯಾಗಿದ್ದು, 5,895 ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ 4925 ಗ್ರಂಥಾಲಯಗಳಿಗೆ ಕಟ್ಟಡ, ಕಟ್ಟಡದ ನವೀಕರಣ, ಕೊಠಡಿಗಳು, ಓದುವ ಸಾಮಗ್ರಿಗಳನ್ನು ಇಡಲು ಕಪಾಟುಗಳು, ಅಗತ್ಯ ಪೀಠೋಪಕರಣಗಳು, ಪುಸ್ತಕ, ನಿಯತಕಾಲಿಕಗಳ ಸಂಗ್ರಹಣೆ ಇತ್ಯಾದಿಗಳನ್ನು ಒದಗಿಸಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಯವರೆಗೆ 5537 ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಈ ಗ್ರಂಥಾಲಯಗಳನ್ನು ಗ್ರಾಮೀಣ ಭಾಗಗಳ್ಲಿ ಪೋಷಿಸಿ ಮಕ್ಕಳಿಗೆ ಅರಿವಿನ ಸಂಗಾತಿಯಾಗಿಸಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಂಥಪಾಲಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.
ಮಕ್ಕಳು ಓದುವ ಅಭ್ಯಾಸದಿಂದ ದೂರ ಉಳಿಯಬಾರದು ಎಂಬ ಉದ್ದೇಶದೊಂದಿಗೆ ಓದುವ ಬೆಳಕು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅಜೀಂ ಪ್ರೇಮ್ ಜೀ ಫೌಂಡೇಶನ್, ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಮತ್ತು ಶಿಕ್ಷಣ ಫೌಂಡೇಶನ್ ಸಂಸ್ಥೆಗಳು ನೆರವು ನೀಡಿವೆ. 6-18 ವರ್ಷದ ಮಕ್ಕಳಿಗೆ ಗ್ರಂಥಾಲಯದ ಸದಸ್ಯತ್ವವನ್ನು ನೀಡಿ ಅವರು ಮನೆಗೆ ಪುಸ್ತಕ ತೆಗೆದುಕೊಂಡು ಹೋಗಿ ಓದಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಗ್ರಂಥಾಲಯಗಳನ್ನು ಉಪಯೋಗಿಸಿಕೊಳ್ಳುವ ಹಾಗೂ ಓದುವ ಹವ್ಯಾಸವನ್ನು ಪ್ರೋತ್ಸಾಹಿಸಿದ್ದರ ಪರಿಣಾಮವಾಗಿ ಇಂದು ಗ್ರಂಥಾಲಯಗಳಲ್ಲಿ ಒಟ್ಟು 47,83,858 ಮಕ್ಕಳು ನೋಂದಣಿಯಾಗಿದ್ದಾರೆ ಎಂದು ಸಭೆಯಲ್ಲಿ ಸಚಿವರಿಗೆ ತಿಳಿಸಲಾಯಿತು.
ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ, ಓದಿನ ಮನೆಗೆ ಹೋಗೋಣ, ಚದುರಂಗ ಆಟ ಆಡೋಣ ಅಭಿಯಾನ, ಗಟ್ಟಿ ಓದು ಅಭಿಯಾನ, ಅಮ್ಮನಿಗಾಗಿ ಒಂದು ಪುಸ್ತಕ, ಪತ್ರ ಬರೆಯುವ ಅಭಿಯಾನ, ಚಿಣ್ಣರ ಚಿತ್ತಾರ, ನಿಮ್ಮ ಗೆಳೆಯರನ್ನು ಗ್ರಂಥಾಲಯಕ್ಕೆ ಕರೆತನ್ನಿ. ಮಕ್ಕಳಿಗೆ ಬೇಸಿಗೆ ಶಿಬಿರ, ಸಣ್ಣ ಕಥೆ ಬರೆಯುವುದು, ನಾನು ಓದುವ ಪುಸ್ತಕಗಳು, ನನ್ನ ಪ್ರೀತಿಯ ಗ್ರಂಥಾಲಯ, ವಾರ್ತಾ ಪತ್ರಿಕೆ ಓದೋಣ ಮುಂತಾದ ಮಕ್ಕಳ ಸ್ನೇಹಿ ಅಭಿಯಾನಗಳನ್ನು ಕೈಗೊಳ್ಳಲಾಗಿದೆ ಎಂದೂ ಸಚಿವರು ಹೇಳಿದರು.
ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ “ಅರಿವು ಕೇಂದ್ರ”ಗಳಾಗಿ ಕಾರ್ಯ ನಿರ್ವಹಿಸಲು ಪೂರಕವಾಗಿ ಕೆಲಸದ ಸಮಯವನ್ನು 6 ರಿಂದ 8 ಗಂಟೆಗಳಿಗೆ ಏರಿಸಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ಕನಿಷ್ಠ ವೇತನ ಮತ್ತು ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು ನೀಡಲಾಗುತ್ತಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವು ಯೋಜನೆಯ (Scheme for Special Assistance to States for Capital Investment) ವ್ಯಾಪ್ತಿಯಲ್ಲಿ ಬರುವ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಗ್ರಂಥಾಲಯಗಳು ಮತ್ತು ಡಿಜಿಟಲ್ ಸೌಕರ್ಯ ಕಾರ್ಯಕ್ರಮಕ್ಕಾಗಿ ರೂ. 263.96 ಕೋಟಿ ರೂ. ಮಂಜೂರು ಮಾಡಿದ್ದು ಮೊದಲನೇ ಕಂತಿನ ಅನುದಾನವಾಗಿ ರೂ. 131.98 ಕೋಟಿಗಳನ್ನು ಬಿಡುಗಡೆಗೊಂಡಿದ್ದು, ರಾಜ್ಯದ 6599 ಹೊಸ ಗ್ರಂಥಾಲಯಗಳಿಗೆ ತಲಾ 4 ಲಕ್ಷ ರೂ. ಗಳು ಲಭ್ಯವಾಗುತ್ತದೆ ಎಂದು ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಸಭೆಯಲ್ಲಿ ಹೇಳಿದರು.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ವ್ಯಾಪ್ತಿಯ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ವತಿಯಿಂದ 6599 ಗ್ರಾಮೀಣ ಗ್ರಂಥಾಲಯಗಳಿಗೆ ಪ್ರತಿ ಗ್ರಾಮ ಪಂಚಾಯಿತಿಗೆ. 2 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ರೂ.131.98 ಕೋಟಿಗಳ ವೆಚ್ಚದಲ್ಲಿ ಖರೀದಿಸಲಾಗುವುದು ಎಂದು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಸಭೆತಯಲ್ಲಿ ಪಾಲ್ಗೊಂಡಿದ್ದ ಗ್ರಂಥಪಾಲಕರಲ್ಲಿ ಹಲವರು ಮಾತನಾಡಿ ವೇತನ ಹೆಚ್ಚಳದ ಸಂಬಂಧ ಸಚಿವರು ಚರಿತ್ರಾರ್ಹ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಿದರಲ್ಲದೆ ಸಚಿವರನ್ನು ಶ್ಲಾಘಿಸಿದರು.
ಲೋಕಸಭಾ ಚುನಾವಣೆ: JDS-BJP ಕ್ಷೇತ್ರ ಹಂಚಿಕೆ ವಾರದೊಳೆಗೆ ಎಲ್ಲಾ ಪ್ರಕ್ರಿಯೆ ಪೂರ್ಣ – HD ದೇವೇಗೌಡ
ಬಿಜೆಪಿ ‘Modi ka Parivar’ ಅಭಿಯಾನ ಆರಂಭ : “ಮೋದಿಗೆ ಕುಟುಂಬವಿಲ್ಲ” ಲಾಲು ಹೇಳಿಕೆಗೆ ತಿರುಗೇಟು