ಬೆಂಗಳೂರು: ಬಜೆಟ್ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮಾಡಿರುವ ಭಾಷಣದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ರಾಜ್ಯದ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಯ ಬಗ್ಗೆ ಹೊಂದಿರುವ ದೂರದೃಷ್ಟಿ ವ್ಯಕ್ತವಾಗಿದೆ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಸರಕಾರವು ಕ್ವಿನ್ ಸಿಟಿ, ವಿಮಾನ ನಿಲ್ದಾಣಗಳ ನಿರ್ಮಾಣ, ಏರ್-ಸ್ಟ್ರಿಪ್ ಅಭಿವೃದ್ಧಿ, ಸಿಗ್ನೇಚರ್ ಪಾರ್ಕ್ ಮುಂತಾದ ಮಹತ್ವದ ಯೋಜನೆಗಳ ಬಗ್ಗೆ ಹೊಂದಿರುವ ಬದ್ಧತೆ ಯನ್ನು ರಾಜ್ಯಪಾಲರ ಭಾಷಣದಲ್ಲಿ ಕಾಣಬಹುದು’ ಎಂದಿದ್ದಾರೆ.
ಸರಕಾರವು ಸಮಗ್ರ ಕೈಗಾರಿಕಾ ಪ್ರಗತಿಗೆ ಸಂಕಲ್ಪ ಮಾಡಿದ್ದು, ಮೂಲಸೌಕರ್ಯ ಅಭಿವೃದ್ಧಿಗೂ ಅದ್ಯತೆ ನೀಡುತ್ತಿದೆ. ಇವುಗಳ ಜತೆಗೆ ತೋಟಗಾರಿಕೆ ವಲಯದ ವಿಸ್ತರಣೆ, ಹೊಸ ತಳಿಗಳ ಸಂಶೋಧನೆ ಮೂಲಕ ರೈತ ಸಮುದಾಯದ ಏಳ್ಗೆಯತ್ತಲೂ ಚಿತ್ತ ನೆಟ್ಟಿದೆ. ಇದು ನಮ್ಮ ಸಮತೋಲನದ ದೃಷ್ಟಿಯನ್ನು ಸಂಕೇತಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರವು ಐದು ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಜನರಿಗೆ ಭದ್ರತೆಯ ಭಾವನೆ ಒದಗಿಸಿದೆ. ಕಲ್ಯಾಣ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿಯ ಅನುಷ್ಠಾನ ಎರಡಕ್ಕೂ ಸಿದ್ದರಾಮಯ್ಯ ಒತ್ತು ನೀಡುತ್ತಿರುವುದು ಗಮನಾರ್ಹವಾಗಿದೆ ಎಂದು ಪಾಟೀಲ ನುಡಿದಿದ್ದಾರೆ.