ಕಲಬುರಗಿ: ಪ್ರಸಕ್ತವಾಗಿ ನೆಟೆರೋಗದಿಂದ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಸಂಪೂರ್ಣವಾಗಿ ಹಾಳಾಗಿ ರೈತ ಕಂಗಾಲಾಗಿದ್ದರೂ ರಾಜ್ಯ ಸರ್ಕಾರ ಪರಿಹಾರ ನೀಡಲು ಮೀನಾ ಮೇಷ ಮಾಡುತ್ತಿರುವುದು ರೈತ ವಿರೋಧಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ನೆಟೆರೋಗದಿಂದ ಶೇ ಅರ್ಧದಷ್ಟು ಅಂದರೆ ಸರಿಸುಮಾರು ಮೂರು ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಸಂಪೂರ್ಣ ತೊಗರಿ ಹಾನಿಯಾಗಿದೆ. ಜತೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇಂತಹ ಸಮಯದಲ್ಲಿ ತುರ್ತಾಗಿ ನೆರವಿಗೆ ಬರುವುದು ಬಿಟ್ಟು ಖುರ್ಚಿ ಉಳಿಸಿಕೊಳ್ಳುವಲ್ಲಿ ಮಗ್ನವಾಗಿರುವುದು ನಾಚಿಗೇಡಿತನ ಸಂಗತಿಯಾಗಿದೆ. ಈಗಲಾದರೂ ತನ್ನ ಧೋರಣೆಯಿಂದ ಹೊರ ಬಂದು ಪರಿಹಾರ ನೀಡಬೇಕೆಂದು ತೇಲ್ಕೂರ ಆಗ್ರಹಿಸಿದ್ದಾರೆ.
ಎರಡು ವರ್ಷಗಳ ಹಿಂದೆ ನೆಟೆರೋಗದಿಂದ ತೊಗರಿ ಬೆಳೆ ಹಾನಿಯಾದಾಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಹಾರ ಮಂಜೂರಾತಿ ನೀಡಿದ್ದನ್ನು ಇಲ್ಲಿ ಅವಲೋಕಿಸಬಹುದಾಗಿದೆ. ಆವಾಗ ಯಾವುದೇ ನಿಟ್ಟಿನಲ್ಲಿ ಸಮೀಕ್ಷೆ ಹಾಗೂ ವರದಿ ಎಂದು ಸಮಯ ವಿಳಂಬ ತೋರದೇ 187 ಕೋ.ರೂ ಬೃಹತ್ ಪರಿಹಾರ ಘೋಷಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರದ ನಡೆ ನೋಡಿದರೆ ತೊಗರಿ ಹಾನಿಗೆ ಪರಿಹಾರ ನೀಡೋದು ಅನುಮಾನ ಕಾಡುತ್ತಿದೆ.
ಘೋಷಣೆಯಲ್ಲೇ ಉಳಿದ ತೊಗರಿ ಖರೀದಿ: ಕೇಂದ್ರದ ಬೆಂಬಲ ಬೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 177 ತೊಗರಿ ಖರೀದಿ ಕೇಂದ್ರಗಳನ್ನು ಘೋಷಿಸಲಾಗಿದೆ. ಮಾರುಕಟ್ಟೆಯಲ್ಲಿ ಕೇಂದ್ರದ ಎಂಎಸ್ ಪಿ ಕ್ವಿಂಟಾಲ್ ಗ 7550 ರೂ ದರದ ಸಮೀಪವಿದೆ. ಆದರೆ ಖರೀದಿ ಪ್ರಕ್ರಿಯೆ ಆರಂಭವಾದರೆ ಮಾರುಕಟ್ಟೆಯಲ್ಲಿ ದರ ಹೆಚ್ಚಳ ವಾಗುತ್ತದೆ. ಆದರೆ ತಾಂತ್ರಿಕ ಕಾರಣವೊಡ್ಡಿ ಇನ್ನೂ ರೈತರ ನೊಂದಣಿ ಪ್ರಕ್ರಿಯೆಯೇ ಆರಂಭವಾಗಿಲ್ಲ ಎಂದು ತೇಲ್ಕೂರ ದೂರಿದ್ದಾರೆ.
ಟೆಕ್ಸ್ ಟೈಲ್ ಪಾರ್ಕ್ ಗೂ ನಿರ್ಲಕ್ಷ್ಯ: ಕಲಬುರಗಿ ಜಿಲ್ಲೆಯ ಫರಹತಾಬಾದ್ ಬಳಿ ಕೇಂದ್ರದ ಪಿಎಂ ಮಿತ್ರ ಟೆಕ್ಸ್ ಟೈಲ್ ಪಾಕ್೯ ಗೆ ಅಡಿಗಲ್ಲು ಹಾಕಿ ಎರಡು ವರ್ಷಗಳಾದರೂ ನಿಂತಲ್ಲೇ ನಿಂತಿದೆ. ಕಳೆದ ವರ್ಷ ರಾಜ್ಯದ ಮುಂಗಡ ಪತ್ರದಲ್ಲಿ ಟೆಕ್ಸ್ ಟೈಲ್ ಪಾರ್ಕ್ ನ ಮೂಲಭೂತ ಸೌಕರ್ಯಗಳಿಗಾಗಿ 50 ಕೋ.ರೂ ಎಂದು ಘೋಷಿಸಲಾಗಿದೆ. ಆದರೆ ಈಗ ಮತ್ತೊಂದು ಮುಂಗಡ ಪತ್ರ ಬಂದರೂ ಅನುದಾನ ಬಿಡುಗಡೆಯಾಗದಿರುವುದು ನಿರ್ಲಕ್ಷ್ಯ ತನಕ್ಕೆ ಹಿಡಿದ ಕನ್ನಡಿಯಾಗಿದೆ. ಅದಲ್ಲದೇ ಈಗ ರಾಜ್ಯ ಸರ್ಕಾರದ ಬದಲು ಕೆಕೆಆರ್ ಡಿಬಿ ಯಿಂದಲೇ ಮೊದಲ ಕಂತಾಗಿ 30 ಕೋ.ರೂ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸಿದ್ದಲ್ಲಿ ಕೇಂದ್ರದಿಂದ ಮೊದಲ ಕಂತಾಗಿ 300 ಬಿಡುಗಡೆಯಾಗಲಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
BREAKING: ಬೆಂಗಳೂರಲ್ಲಿ ಕಾಲೇಜಿನ ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ