ತುಮಕೂರು : “ಬೆಂಗಳೂರಿನ ಮೇಲೆ ಹೆಚ್ಚುತ್ತಿರುವ ಒತ್ತಡ ತಗ್ಗಿಸಲು ತುಮಕೂರು ಜಿಲ್ಲೆಯನ್ನು ಎರಡನೇ ಬೆಂಗಳೂರಾಗಿ ಅಭಿವೃದ್ಧಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ತುಮಕೂರು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;
“ತುಮಕೂರು ಜಿಲ್ಲೆ ಎರಡನೇ ಬೆಂಗಳೂರು ಆಗಿ ಪರಿವರ್ತನೆಯಾಗುವ ನಂಬಿಕೆ ಇದೆ. ಇಲ್ಲಿಯ ಸಂಸ್ಕೃತಿ, ಇಲ್ಲಿಯ ಜನ, ಇಲ್ಲಿಯ ನೆಲಕ್ಕೆ ತನ್ನದೇ ಆದ ಶಕ್ತಿ ಇದೆ. ತುಮಕೂರು ಜಿಲ್ಲೆಯನ್ನು ಹೊಸ ಬೆಂಗಳೂರಾಗಿ ಪರಿವರ್ತಿಸಲು ಮುಂದಿನ 50 ವರ್ಷಗಳ ಯೋಜನೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಬೆಂಗಳೂರಿನ ಸಚಿವನಾಗಿ ನಾನು ಬೆಂಗಳೂರಿನ ಒತ್ತಡ ಕಡಿಮೆ ಮಾಡಬೇಕು ಎಂದು ಆಲೋಚನೆ ಮಾಡಿದಾಗ, ರಾಮನಗರ, ಚನ್ನಪಟ್ಟಣ, ನೆಲಮಂಗಲ, ದೊಡ್ಡಬಳ್ಳಾಪುರ ನಂತರ ತುಮಕೂರು ಪರ್ಯಾಯವಾಗಿದೆ.
ಇಂದು ತುಮಕೂರು ಜಿಲ್ಲೆಯ ಸಾವಿರಾರು ಕೋಟಿಯ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಯುವಕರು, ಮಹಿಳೆಯರು, ರೈತರು ಭಾಗವಹಿಸಿದ್ದಾರೆ. ತುಮಕೂರು ಕಲ್ಪತರುನಾಡು. ಇತಿಹಾಸ ಹೊಂದಿರುವ ಧಾರ್ಮಿಕ ಕ್ಷೇತ್ರ ಕೂಡ ಆಗಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ದೂರದೃಷ್ಟಿ ಇಟ್ಟುಕೊಂಡು ತುಮಕೂರಿನಲ್ಲಿ ಕೈಗಾರಿಕಾ ಪ್ರದೇಶ ಆರಂಭಿಸಲಾಯಿತು. ಈ ಭಾಗದ ಅಭಿವೃದ್ಧಿಗೆ ಬೆಂಗಳೂರಿನಿಂದ ಬೆಳಗಾವಿ ಮೂಲಕ ಪೂನಾಗೆ ಸಾಗುವ ಕಾರಿಡಾರ್ ಗೆ ನಾವು ಆದ್ಯತೆ ನೀಡಬೇಕಿದೆ.
ನೀವು ನಮಗೆ 135 ಕ್ಷೇತ್ರಗಳನ್ನು ಗೆಲ್ಲಿಸಿ ಅಧಿಕಾರ ನೀಡಿದ್ದೀರಿ. ನಾವು ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದರಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಮನೆಯೊಡತಿಯರ ಖಾತೆಗೆ 2 ಸಾವಿರ ಹಣ ತಲುಪುತ್ತಿದೆ. ನಿಮ್ಮ ಮನೆ ಗೃಹಜ್ಯೋತಿ ಯೋಜನೆ ಬೆಳಗುತ್ತಿದೆ. ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ, ನಿರುದ್ಯೋಗ ಯುವಕರಿಗಾಗಿ ಯುವನಿಧಿ ಯೋಜನೆ ಜಾರಿಗೆ ತರಲಾಗಿದೆ.
ಈ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಆರ್ಥಿಕ ಶಕ್ತಿ ತುಂಬಿ ದೊಡ್ಡ ಬದಲಾವಣೆ ತರುತ್ತಿವೆ. ನಮ್ಮ ಸರ್ಕಾರ ಕೇವಲ ಗ್ಯಾರಂಟಿ ಯೋಜನೆ ಮಾತ್ರವಲ್ಲ, ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದೆ. ನಾನು ತುಮಕೂರಿಗೆ ಬಂದಾಗೆಲ್ಲಾ ನನಗೆ ಪಾವಗಡ ನೆನಪಾಗುತ್ತದೆ. ಪಾವಗಡದ ಜನರು ನನಗೆ ಕೊಟ್ಟ ಸಹಕಾರ ಮರೆಯಲು ಸಾಧ್ಯವಿಲ್ಲ. ಇನ್ನು 10 ಸಾವಿರ ಎಕರೆ ಭೂಮಿಯನ್ನು ಸೌರ ವಿದ್ಯುತ್ ಘಟಕಕ್ಕೆ ನೀಡಲು ರೈತರು ಮುಂದೆ ಬಂದಿದ್ದಾರೆ. ಈ ಭೂಮಿಯನ್ನು ಬಳಸಿಕೊಂಡು ಇನ್ನು 2 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸರ್ಕಾರ ಕಾರ್ಯಕ್ರಮ ರೂಪಿಸುತ್ತಿದೆ.
ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಬೇಕು, ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದಕ್ಕಾಗಿ ಕೈಗಾರಿಕ ಪ್ರದೇಶಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ದೇವರು ನಮಗೆ ವರ ಮತ್ತು ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಈ ಅವಕಾಶದಲ್ಲಿ ನಾವು ಯಾವ ರೀತಿ ಬದಲಾವಣೆ ತರುತ್ತೇವೆ ಎಂಬುದು ಮುಖ್ಯ. ರೈತರ ಬದುಕಿನಲ್ಲಿ ಬದಲಾವಣೆ ತರಬೇಕು, ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ. ಈ ಸರ್ಕಾರ ಕೊಟ್ಟ ಮಾತಿನಂತೆ ನುಡಿದಂತೆ ನಡೆದಿದೆ. ನಿಮ್ಮ ಬದುಕು ಹಸನ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರದ ಎಲ್ಲಾ ಇಲಾಖೆ ಸಚಿವರುಗಳು ಕೂಡ ನಿಮ್ಮ ಸೇವೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ.
‘ಉದ್ಯೋಗಾಕಾಂಕ್ಷಿ’ಗಳೇ ಗಮನಿಸಿ: ನಾಳೆ ಶಿವಮೊಗ್ಗದಲ್ಲಿ ‘ಉದ್ಯೋಗ ಮೇಳ’ ಆಯೋಜನೆ
ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ಪದಚ್ಯುತಿ ಪಕ್ಕಾ.? : ‘ವಾಗ್ದಂಡನೆ ನಿರ್ಣಯ’ ಮಂಡನೆಗೆ ವಿಪಕ್ಷಗಳ ಸಿದ್ಧತೆ : ವರದಿ