ಬೆಂಗಳೂರು: ಸರ್ಕಾರ ಗ್ರಾಮ ಪಂಚಾಯತಿಗಳನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠಗೊಳಿಸುವ ಸಂಕಲ್ಪ ಮಾಡಿದ್ದು, ಗ್ರಾಮ ಪಂಚಾಯತಿ ಸದಸ್ಯರು ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬೇಡಿಕೆಗಳನ್ನು ಆಲಿಸಿ ವಿಸೃತವಾಗಿ ಚರ್ಚಿಸಿದ ನಂತರ ಒಕ್ಕೂಟ ನೀಡಿರುವ ಬೇಡಿಕೆಗಳನ್ನು ಪರಿಶೀಲಿಸಿ ಸಾಧ್ಯವಾಗಬಲ್ಲ ಬೇಡಿಕೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತಿಗಳು ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಂತೆ ಜವಾಬ್ದಾರಿ ನಕ್ಷೆಯಲ್ಲಿರುವ ರೀತಿಯಲ್ಲಿ ಅಧಿಕಾರ, ಹಣಕಾಸು, ಮಾನವ ಸಂಪನ್ಮೂಲ ಹಾಗೂ ಜವಾಬ್ದಾರಿ ನಿರ್ವಹಿಸುವ ಸ್ವಾತಂತ್ರ್ಯವನ್ನು ಪಂಚಾಯತಿಗಳಿಗೆ ವರ್ಗಾಯಿಸುವ ಬಗ್ಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ.ಚಲಪತಿ ಮತ್ತು ಪದಾಧಿಕಾರಿಗಳಿಗೆ ತಿಳಿಸಿದರು
ಗ್ರಾಮಸಭೆಗಳು ಸದೃಢವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವುದು, ಬಾಪೂಜಿ ಸೇವಾ ಕೇಂದ್ರಗಳನ್ನು ಸಶಕ್ತಗೊಳಿಸುವುದು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಶಿಷ್ಟಾಚಾರ ವ್ಯಾಪ್ತಿಗೆ ತರುವ ಮೂಲಕ ಸರ್ಕಾರದ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಹಾಗೂ ಶಿಲಾಫಲಕಗಳಲ್ಲಿ ಹೆಸರು ನಮೂದಿಸಲು ಅವಕಾಶ ಮಾಡಿಕೊಡುವುದು , ಸದಸ್ಯರ ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸದಸ್ಯರ ಒಕ್ಕೂಟ ಸಚಿವರಲ್ಲಿ ನಿವೇದಿಸಿಕೊಂಡಿತು.
ಕಳೆದ 8ರಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು ಒಕ್ಕೂಟದ ಪದಾಧಿಕಾರಿಗಳನ್ನು ಚರ್ಚೆಗೆ ಆಹ್ವಾನಿಸಿ ಸತ್ಯಾಗ್ರಹ ಕೈ ಬಿಡಲು ಕೋರಿದ್ದರು. ಸಚಿವರ ಭರವಸೆಯಂತೆ ಮುಷ್ಕರ ಕೈ ಬಿಟ್ಟಿದ್ದ ಒಕ್ಕೂಟದ ಪದಾಧಿಕಾರಿಗಳು ಇಂದು ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇಡಿಕೆಗಳನ್ನು ಕುಲಂಕುಷವಾಗಿ ಆಲಿಸಿ ಸ್ಪಂದಿಸುವ ಮೂಲಕ ಪಂಚಾಯತಿ ಸದಸ್ಯರಲ್ಲಿ ಭರವಸೆ ಮೂಡಿಸಿದ್ದಾರೆಂದು ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಈ ಸಂದರ್ಭದಲ್ಲಿ ಹೇಳಿದರು.
BIG NEWS: ರಾಜ್ಯದಲ್ಲಿ 50 ಸಾವಿರ ಕೋಟಿ ಹೂಡಿಕೆ, 58 ಸಾವಿರ ‘ಉದ್ಯೋಗ’ ಸೃಷ್ಟಿ- ಸಚಿವ ಎಂ.ಬಿ ಪಾಟೀಲ್
‘UPI’ ಆರಂಭ ಅಸ್ತಿತ್ವದಲ್ಲಿರುವ ಬಲವಾದ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು: ಮಾರಿಷಸ್ ರಾಯಭಾರಿ