ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿ ಶಾಂತಿ ಕದಡಲು ಜಿಲ್ಲಾಡಳಿತವೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೂಡಲೇ ಮಂಡ್ಯ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಕೆರಗೋಡು ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು; ಶಾಂತಿಯಿಂದ ಇದ್ದ ಕೆರಗೋಡು ಗ್ರಾಮದಲ್ಲಿ ಅಶಾಂತಿ ಉಂಟಾಗಿದೆ. ಇದಕ್ಕೆ ಸರಕಾರ ಮತ್ತು ಜಿಲ್ಲಾಧಿಕಾರಿಯೇ ಹೊಣೆ ಎಂದು ದೂರಿದರು.
ನಾನು ಸರಕಾರಕ್ಕೆ ನೇರವಾಗಿ ಪ್ರಶ್ನೆ ಕೇಳುತ್ತೇನೆ. ಎಷ್ಟು ದಿನ ಈ ಉದ್ಧಟತನ? ಎಷ್ಟು ದಿನ ನಿಮ್ಮ ಆಟ? ಬಹಳ ದಿನ ನಡೆಯಲ್ಲ, ಎಚ್ಚರಿಕೆಯಿಂದ ಇರಿ ಎಂದ ಅವರು; ಪೊಲೀಸ್ ಅಧಿಕಾರಿಗಳು ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು. ಈ ಬಗ್ಗೆ ಶಾಂತಿ ಕಾಪಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೆ. ಗ್ರಾಮಸ್ಥರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಿ ಅಂತ ಹೇಳಿದ್ದೆ. ಆದರೆ, ಜಿಲ್ಲಾಧಿಕಾರಿ ಮಾಡಿದ್ದೇನು? ಕೆರಗೋಡು ಕೆಂಡವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಅದನ್ನು ಸರಿಪಡಿಸಿ. ರೈತರಿಗೆ ಪರಿಹಾರ ಕೊಡಿ. ಕೆರಗೋಡುನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಾಠಿ ಚಾರ್ಜ್ ಮಾಡುವ ಮೂಲಕ ಸರಕಾರ ದೌರ್ಜನ್ಯ ಪ್ರದರ್ಶನ ಮಾಡಿದೆ. ಜನ ವಿರೋಧಿ ಆಡಳಿತ ಮಾಡಲು ಜನರು ಇವರಿಗೆ ಅಧಿಕಾರ ಕೊಟ್ಟಿದ್ದಾರಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ ರಾಜಕೀಯ ಮಾಡಲಾಗಿದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಈ ರೀತಿಯ ಕೆಲಸ ಮಾಡಲಾಗಿದೆ. ನ್ಯಾಯ ಸಿಗುವವರೆಗೆ ನಾವು ಹೋರಾಟ ಮಾಡೋಣ. ರಾಷ್ಟ್ರಧ್ವಜ ಹಾರಿಸುವುದರಲ್ಲಿ ಕಾಂಗ್ರೆಸ್ ನವರಿಗಿಂತ ನಾವೇನು ಕಡಿಮೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಗೌರಿಶಂಕರ ಟ್ರಸ್ಟ್ ನವರು ಧ್ವಜಸ್ತಂಭ ನಿರ್ಮಿಸಲು ಅನುಮತಿ ಕೋರಿದ್ದಾರೆ. ನಿಮಗಿಂತ ಹೆಚ್ಚು ಜವಾಬ್ದಾರಿ ನಮಗೆ ಇದೆ. ಸರ್ಕಾರಕ್ಕೆ ಜವಾಬ್ದಾರಿ ಇಲ್ಲ ಎಂದು ಅವರು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ
ಸಿದ್ದರಾಮಯ್ಯ ಅವರೇ ರಾಜಕಾರಣ ಮಾಡುತ್ತಿರುವುದು ನಿಮ್ಮ ಪಕ್ಷ. ಇದು ಎರಡೂ ನಿಮಿಷದಲ್ಲಿ ಬಗೆಹರಿಸುವ ವಿಷಯ..ಇಷ್ಟೊಂದು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿರೋದು ನಿಮ್ಮ ಪಕ್ಷದವರು. ರಾಜಕೀಯ ಮಾಡಿ ಲಾಭ ಪಡೆಯಬೇಕಿಲ್ಲ. ಅಮಾಯಕರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಪೊಲೀಸ್ ಇಲಾಖೆ, ಅಧಿಕಾರಿಗಳು ಪ್ರಚೋದನೆ ಕೊಟ್ಟಿದ್ದಾರೆ. ನಿಮಗೆ ಅಲ್ಪಸ್ವಲ್ಪ ಆಡಳಿತದ ಅನುಭವ ಇದೆ ಅಂತೀರಿ. 14 ಬಾರಿ ಬಜೆಟ್ ಕೊಟ್ಟವನು ಅಂತೀರಿ. ನಿಮಗೆ ಸ್ವಲ್ಪವಾದರೂ ಆಡಳಿತ ಪ್ರಜ್ಞೆ ಇದೆಯಾ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಇಟ್ಟುಕೊಂಡು ಟಾರ್ಗೆಟ್ ಮಾಡಿದ್ದು ನಾವಲ್ಲ, ನೀವು. ಶೋಷಿತ ವರ್ಗಗಳ ಸಮಾವೇಶ ಮಾಡಿ ಮಟನ್ ಊಟ ಹಾಕಿಸಿದ್ದಾರೆ. ಅದು ರಾಜಕೀಯ. ನೀವು ಎಷ್ಟು ವರ್ಷ ಮುಖ್ಯಮಂತ್ರಿ ಆಗಿದ್ದೀರಿ? 5 ವರ್ಷ ಪೂರ್ಣಾವಧಿ, ಈಗ 1 ವರ್ಷ. ಹಿಂದೆ ಡಿಸಿಎಂ ಆಗಿ ಎಷ್ಟು ವರ್ಷ ಇದ್ದಿರಿ? ನಿಮ್ಮನ್ನು ಯಾರು ಹಿಡಿದುಕೊಂಡಿದ್ದರು ಶೋಷಿತರ ಸಮಾಜ ಸರಿಪಡಿಸಬೇಡಿ ಎಂದು. 14 ಬಜೆಟ್ ಕೊಟ್ಟೆ ಅಂತ ಭಾಷಣ ಮಾಡ್ತಿರಾ, ಶೋಷಿತ ವರ್ಗಕ್ಕೆ ಏನು ಕೊಟ್ರಿ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು ಕುಮಾರಸ್ವಾಮಿ.
ಪೊಲೀಸರು ಫ್ಲೆಕ್ಸ್ ಗೆ ರಕ್ಷಣೆ ಕೊಡುತ್ತಿದ್ದಾರೆ!
ಕೋರ್ಟ್ ಆದೇಶದ ಮೇಲೆ ಪ್ಲೇಕ್ಸ್ ಹಾಕುವುದಕ್ಕೆ ಅನುಮತಿ ಬೇಕು. ಹನುಮಧ್ವಜ ತೆಗೆದಿದ್ದೀರಿ, ರಸ್ತೆಯಲ್ಲಿ ಪ್ಲೆಕ್ಸ್ ಹಾಕಿದ್ದಿರಲ್ಲ, ಆ ಮಹಾನುಭಾವರು ಯಾರು? ಅದಕ್ಕೆ ಯಾರು ಅನುಮತಿ ಕೊಟ್ಟವರು? ಪ್ಲೆಕ್ಸ್ ತೆಗೆಯೋದಕ್ಕೆ ಹೋದವರ ಮೇಲೆ ಲಾಠಿಚಾರ್ಜ್ ಮಾಡೋದು ಎಷ್ಟು ಸರಿ? ಪ್ಲೆಕ್ಸ್ ಗಳಿಗೆ ಪೊಲೀಸರು ರಕ್ಷಣೆ ಕೊಡುತ್ತಿದ್ದಾರೆ. ಮುಂದೆ ರಸ್ತೆಯಲ್ಲಿ ಓಡಾಡದ ಪರಿಸ್ಥಿತಿಗೆ ಜನ ಬರುವ ಅಪಾಯ ಇದೆ. ಕಾಂಗ್ರೆಸ್ ನವರು ಮಂಡ್ಯದಲ್ಲಿ ರಾಜಕಾರಣ ಶುರು ಮಾಡಿದ್ದಾರೆ. 35 ವರ್ಷಗಳ ಹಿಂದೆ ಇದೇ ಸಿದ್ದರಾಮಯ್ಯ ಅವರು ಧ್ವಜಸ್ತಂಭ ಉದ್ಘಾಟನೆ ಮಾಡಿದ್ದರು ಎಂದು ತಿರುಗೇಟು ಕೊಟ್ಟರು ಕುಮಾರಸ್ವಾಮಿ ಅವರು.
ನಿಷೇಧಾಜ್ಞೆ ತೆಗೆಯಿರಿ ಎಂದು ಆಗ್ರಹ
ಕೆರಗೋಡು ಗ್ರಾಮದಲ್ಲಿ 144 ಸೆಕ್ಷನ್ ವಾಪಸ್ ಪಡೆಯಿರಿ, ಶಾಂತಿ ಸ್ಥಾಪನೆಗೆ ನಾನು ಜವಾಬ್ದಾರಿ ಆಗುತ್ತೇನೆ. ಇಲ್ಲ ನಾವೇ ಹೆಚ್ಚು ಜನ ಸೇರಿಸಿದರೆ ಏನಾಗುತ್ತದೆ, ಯೋಚನೆ ಮಾಡಿ. ರಾಜಕೀಯ ಬಿಟ್ಟು ಶಾಂತಿ ನೆಲೆಸುವಂತೆ ಮಾಡಲು ಕ್ರಮ ಕೈಗೊಳ್ಳಿ. ಜನರು ರೊಚ್ಚಿಗೆದ್ದರೆ ಯಾವ 144 ಸೆಕ್ಷನ್ ಉಳಿಯಲ್ಲ. ಮೊದಲು 144 ಸೆಕ್ಷನ್ ವಾಪಸ್ ಪಡೆಯಿರಿ ಎಂದು ಅವರು ಒತ್ತಾಯ ಮಾಡಿದರು.
ಬಿಜೆಪಿ ಹಿರಿಯ ನಾಯಕರಾದ ಸಿಟಿ ರವಿ, ಮಾಜಿ ಶಾಸಕರಾದ ಸುರೇಶ್ ಗೌಡ, ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ ಸೇರಿ ಎರಡೂ ಪಕ್ಷಗಳ ರಾಜ್ಯ, ಜಿಲ್ಲಾ ಮುಖಂಡರು ಹಾಗೂ ಅಸಂಖ್ಯಾತ ಕಾರ್ಯಕರ್ತರು ಭಾಗಿಯಾಗಿದ್ದರು.
ಶಿವಮೊಗ್ಗ: ಜ.31ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
‘ರೈತ’ರಿಗೆ ಗುಡ್ ನ್ಯೂಸ್: ಶೇ.50ರಷ್ಟು ರಿಯಾಯಿತಿ ದರದಲ್ಲಿ ‘ಕೃಷಿ ಉಪಕರಣ’ ಪಡೆಯಲು ಅರ್ಜಿ ಆಹ್ವಾನ