ಬೆಂಗಳೂರು: ಕರ್ನಾಟಕದಲ್ಲಿ ಮೀಟರ್ ಬಡ್ಡಿ ದಂಧೆ ನಿಯಂತ್ರಣಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದರಂತೆ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ, ಉಭಯ ಸದನಗಳಲ್ಲಿ ಅಂಕಿತ ಪಡೆದಿತ್ತು. ಈಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ ) ಅಧಿನಿಯಮ 2025ಕ್ಕೆ ಅಂಕಿತ ನೀಡಿದ್ದಾರೆ. ಹೀಗಾಗಿ ಇನ್ಮುಂದೆ ಅಕ್ರಮ ಮೀಟರ್ ಬಡ್ಡಿ ದಂಧೆ ನಡೆಸಿದ್ರೇ ಜೈಲು, ದಂಡ ಫಿಕ್ಸ್ ಆದಂತೆ ಆಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025ರ ಕರ್ನಾಟಕ ಅಧಿನಿಯಮ ಸಂಖ್ಯೆ 17 ಎಂಬುದಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ IV) ಪ್ರಕಟಿಸಬೇಕೆಂದು ಆದೇಶಲಾಗಿದೆ ಎಂದಿದ್ದಾರೆ.
ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ಅಧಿನಿಯಮ, 2025 (2025 ರ ಮಾರ್ಚ್ ತಿಂಗಳ 24ನೇ ದಿನಾಂಕದಂದು ರಾಜ್ಯಪಾಲರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ) ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ, 2004ನ್ನು ತಿದ್ದುಪಡಿ ಮಾಡಲು ಒಂದು ಅಧಿನಿಯಮ.
ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ, 2004 (2004ರ ಕರ್ನಾಟಕ ಅಧಿನಿಯಮ 14ನ್ನು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ ; ವರ್ಷದಲ್ಲಿ ಕರ್ನಾಟಕ ರಾಜ್ಯ
ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.. (1) ಈ ಅಧಿನಿಯಮವನ್ನು ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೆ ಜಾರಿಗೆ ಬರತಕ್ಕದ್ದು.
2. ಪ್ರಕರಣ 3ರ ಪ್ರತಿಯೋಜನೆ.- ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ, 2004 (2004ರ ಕರ್ನಾಟಕ ಅಧಿನಿಯಮ 14)ರ (ಇಲ್ಲಿ ಇನ್ನುಮುಂದೆ ಮೂಲ ಕರೆಯಲಾಗಿದೆ) 3ನೇ ಪ್ರಕರಣದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
ಅಧಿನಿಯಮವೆಂದು
“3. ಮಿತಿಮೀರಿದ ಬಡ್ಡಿ ವಿಧಿಸುವಿಕೆ ಮತ್ತು ಬಲವಂತದ ಕ್ರಮದ ಬಳಕೆಯ ನಿಷೇಧ.. (1) ಯಾರೇ ವ್ಯಕ್ತಿಯೂ ಆತನು ನೀಡಿದ ಯಾವುದೇ ಸಾಲದ ಮೇಲೆ ಮಿತಿಮೀರಿದ ಬಡ್ಡಿಯನ್ನು ವಿಧಿಸತಕ್ಕದ್ದಲ್ಲ.
(2) ಲೇವಾದೇವಿದಾರನು ಸಾಲಗಾರರಿಂದ ಹಣ ವಸೂಲಾತಿಗಾಗಿ ಆತನಾಗಲಿ ಅಥವಾ ಆತನ ಏಜೆಂಟರ ಮೂಲಕವಾಗಲಿ ಅಥವಾ ಆತನ ಕುಟುಂಬ ಸದಸ್ಯರ ಮೂಲಕವಾಗಲಿ ಯಾವುದೇ ಇತರ ಬಲವಂತದ ಕ್ರಮವನ್ನು ಬಳಸತಕ್ಕದ್ದಲ್ಲ ಮತ್ತು ಬಲವಂತ ವಸೂಲಾತಿಯ ಯಾವುದೇ ಸ್ವರೂಪಕ್ಕಾಗಿ ಈ ಅಧಿನಿಯಮದ ಉಪಬಂಧಗಳಡಿ ದಂಡನೆಗೆ ಹೊಣೆಯಾಗತಕ್ಕದ್ದು ಹಾಗೂ ಈ ಅಧಿನಿಯಮದ ಮೇರೆಗೆ ಉಪಬಂಧಿಸಲಾದಂತೆ ಅಂಥ ಲೇವಾದೇವಿದಾರನ ನೋಂದಣಿಯನ್ನು ಅಮಾನತ್ತುಪಡಿಸಲು ಅಥವಾ ರದ್ದುಪಡಿಸಲು ನೋಂದಣಿ ಪ್ರಾಧಿಕಾರಿಯು ಅಧಿಕಾರವುಳ್ಳವನಾಗಿರತಕ್ಕದ್ದು.
ವಿವರಣೆ: ಈ ಪ್ರಕರಣದ ಉದ್ದೇಶಗಳಿಗಾಗಿ, ಲೇವಾದೇವಿದಾರನ ಮೂಲಕ ಸಾಲಗಾರರ ವಿರುದ್ಧದ “ಬಲವಂತದ ಕ್ರಮ”ವು ಈ ಮುಂದಿನವುಗಳನ್ನು ಒಳಗೊಳ್ಳುವುದು, ಎಂದರೆ:-
(i) ಸಾಲಗಾರರನ್ನು ಅಥವಾ ಆತನ/ಆಕೆಯ ಕುಟುಂಬ ಸದಸ್ಯರಿಗೆ ಒತ್ತಡವನ್ನು ಹಾಕುವುದು ಅಥವಾ ತಡೆಯೊಡ್ಡುವುದು ಅಥವಾ ಹಿಂಸೆಯನ್ನು ಬಳಸುವುದು ಅಥವಾ ಅವಮಾನಿಸುವುದು ಅಥವಾ ಬೆದರಿಸುವುದು, ಅಥವಾ
(ii) ಸಾಲಗಾರನನ್ನು, ಆತನ/ಆಕೆಯ ಕುಟುಂಬ ಸದಸ್ಯರನ್ನು ಸ್ಥಳದಿಂದ ಸ್ಥಳಕ್ಕೆ ನಿರಂತರವಾಗಿ ಹಿಂಬಾಲಿಸುವುದು ಅಥವಾ ಆತನ/ಆಕೆಯ ಒಡೆತನದ ಅಥವಾ ಬಳಕೆಯಲ್ಲಿನ ಯಾವುದೇ ಸ್ವತ್ತಿಗೆ ಮಧ್ಯಪ್ರವೇಶಿಸುವುದು ಅಥವಾ ಆತನ/ಆಕೆಯಿಂದ ಕಿತ್ತುಕೊಳ್ಳುವುದು ಅಥವಾ ಯಾವುದೇ ಅಂಥ ಸ್ವತ್ತಿನ ಬಳಕೆಗೆ ಆತನಿಗೆ/ಆಕೆಗೆ ಅಡ್ಡಿಪಡಿಸುವುದು, ಅಥವಾ
(iii) ಸಾಲಗಾರನು ವಾಸವಾಗಿರುವ ಅಥವಾ ಕೆಲಸ ಮಾಡುತ್ತಿರುವ ಅಥವಾ ವ್ಯವಹಾರ ನಡೆಸುತ್ತಿರುವ ಮನೆ ಅಥವಾ ಇತರ ಸ್ಥಳಕ್ಕೆ ಬಲವಂತದ ಕ್ರಮವನ್ನು ಕೈಗೊಳ್ಳುವ ಉದ್ದೇಶದಿಂದ ಆಗಾಗ ಭೇಟಿ ನೀಡುವುದು ಅಥವಾ ಭೇಟಿಯಾಗುವಂತೆ ಮಾಡುವುದು, ಅಥವಾ
(iv) ಸಾಲಗಾರನಿಗೆ ಹಣ ಪಾವತಿಗಾಗಿ ಬಲವಂತದ ಮತ್ತು ಅನುಚಿತ ಪ್ರಭಾವವನ್ನು ಬಳಸಿ ಮಾತುಕತೆಗೆ/ಒತ್ತಾಯಿಸುವುದಕ್ಕೆ ಖಾಸಗಿ ಅಥವಾ ಹೊರಗುತ್ತಿಗೆ ಅಥವಾ ಬಾಹ್ಯ ಏಜೆನ್ಸಿಗಳ, ಕ್ರಿಮಿನಲ್ ಹಿನ್ನಲೆಯುಳ್ಳವರ ಸೇವೆಯನ್ನು ಬಳಸುವುದು, ಅಥವಾ
(v) ಸರ್ಕಾರದ ಯಾವುದೇ ಕಾರ್ಯಕ್ರಮದಡಿಯಲ್ಲಿ ಸಾಲಗಾರನಿಗೆ ಪ್ರಯೋಜನದ ಹಕ್ಕುಗಳುಳ್ಳ ಯಾವುದೇ ದಸ್ತಾವೇಜನ್ನು ಸಾಲಗಾರನಿಂದ ಬಲವಂತವಾಗಿ ಪಡೆಯುವುದು.”
3. ಪ್ರಕರಣ 4ರ ತಿದ್ದುಪಡಿ,- ಮೂಲ ಅಧಿನಿಯಮದ 4ನೇ ಪ್ರಕರಣದಲ್ಲಿ,-
(ಎ) “ಮೂರು ವರ್ಷಗಳವರೆಗೆ” ಎಂಬ ಪದಗಳ ಬದಲಿಗೆ “ಹತ್ತು ವರ್ಷಗಳವರೆಗೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು, ಮತ್ತು
(ಬಿ) “ಮೂವತ್ತು ಸಾವಿರ ರೂಪಾಯಿಗಳವರೆಗೆ” ಎಂಬ ಪದಗಳ ಬದಲಿಗೆ “ಐದು ಲಕ್ಷ ರೂಪಾಯಿಗಳವರೆಗೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು,
4. ಹೊಸ ಪ್ರಕರಣ 4ಎ ಮತ್ತು 4ಬಿಗಳ ಸೇರ್ಪಡೆ.- ಮೂಲ ಅಧಿನಿಯಮದ 4ನೇ ಪ್ರಕರಣದ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
ಅಮಾನತ್ತುಗೊಳಿಸುವ
“4ಎ. ನೋಂದಣಿಯನ್ನು ರದ್ದುಗೊಳಿಸುವ ಅಥವಾ ಅಧಿಕಾರ (1) ನೋಂದಣಿ ಪ್ರಾಧಿಕಾರಿಯು ಯಾವುದೇ ಸಮಯದಲ್ಲಿ ಸ್ವತಃ ಅಥವಾ ಸಾಲಗಾರನಿಂದ ದೂರು ಸ್ವೀಕರಿಸಿದ ಮೇಲೆ ಅಂಥ ರದ್ದತಿಗಾಗಿ ಲಿಖಿತದಲ್ಲಿ ಸಾಕಷ್ಟು ಕಾರಣಗಳನ್ನು ನೀಡಿದ ತರುವಾಯ ಮತ್ತು ಅದನ್ನು ಆಲಿಸಿದ ತರುವಾಯ ಲೇವಾದೇವಿದಾರನ ನೋಂದಣಿಯನ್ನು ರದ್ದುಗೊಳಿಸಬಹುದು ಅಥವಾ ರದ್ದುಪಡಿಸಲು ಶಿಫಾರಸ್ಸು ಮಾಡಬಹುದು ಹಾಗೂ ಲೇವಾದೇವಿದಾರನನ್ನು ಯಾವ ಅಂಶಗಳ ಮೇಲೆ ಮೇಲ್ನೋಟಕ್ಕೆ ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆಯೆಂದು ತಿಳಿಸುವ ನೋಟೀಸು ನೀಡಿದ ಹೊರತು ಮತ್ತು ಲೇವಾದೇವಿದಾರನಿಗೆ ಅಂಥ ನೋಟೀಸಿನ ವಿರುದ್ಧ ಅಹವಾಲನ್ನು ಹೇಳಿಕೊಳ್ಳುವ ಸೂಕ್ತ ಅವಕಾಶವನ್ನು ನೀಡಿದ ಹೊರತು ನೋಂದಣಿ ರದ್ದತಿಯ ಆದೇಶವನ್ನು ಹೊರಡಿಸತಕ್ಕದ್ದಲ್ಲ.
ವಿವರಣೆ: ಉಪಪಕರಣ (1)ರ ಉದ್ದೇಶಗಳಿಗಾಗಿ ಲೇವಾದೇವಿದಾರನು, ಈ ಅಧಿನಿಯಮದ ಯಾವುದೇ ಉಪಬಂಧಗಳ ಉಲ್ಲಂಘನೆಯ ಅಪರಾಧಕ್ಕಾಗಿನ ಅಪರಾಧ ನಿರ್ಣಯವು ಅದರ ನೋಂದಣಿಯನ್ನು ಅಮಾನತ್ತುಗೊಳಿಸಲು ಅಥವಾ ರದ್ದುಗೊಳಿಸಲು ಸಾಕಷ್ಟು ಕಾರಣವುಳ್ಳದ್ದಾಗಿರತಕ್ಕದ್ದು.
(2) ನೋಂದಣಿ ಪ್ರಾಧಿಕಾರಿಯು (1)ನೇ ಉಪಪ್ರಕರಣದಡಿ ವಿಚಾರಣೆಯನ್ನು ಬಾಕಿಯಿರಿಸಿ, ದಾಖಲಿಸಬೇಕಾದ ಸಾಕಷ್ಟು ಕಾರಣಗಳಿಗಾಗಿ ಲೇವಾದೇವಿದಾರನ ನೋಂದಣಿಯನ್ನು ಅಮಾನತ್ತುಪಡಿಸಬಹುದು.
4ಬಿ. ಸಾಲನೀಡಿಕೆ ಮಾನದಂಡಗಳು. ಸರ್ಕಾರವು ಅಧಿಸೂಚನೆಯ ಮೂಲಕ ಸಾಲನೀಡಿಕೆ ಮಾನದಂಡಗಳು, ಸಂಗ್ರಹಣೆ ಮತ್ತು ವಸೂಲಾತಿ ಪದ್ಧತಿಗಳನ್ನು
ನಿರ್ದಿಷ್ಟಪಡಿಸಬಹುದು ಎಂದಿದ್ದಾರೆ.