ಬೆಂಗಳೂರು: ಬೆಂಗಳೂರು ಅರಮನೆ ಭೂ ಬಳಕೆ, ನಿಯಂತ್ರಣ ವಿಧೇಯಕಕ್ಕೆ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಎರಡು ಸದನದಲ್ಲಿ ಅಂಕಿತ ಸೂಚಿಸಲಾಗಿತ್ತು. ಈ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ಅರಮನೆ( ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ 2025ಕ್ಕೆ ಅಂಕಿತ ಸೂಚಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ವಿಶೇಷ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ, 2025 ಇದಕ್ಕೆ 2025 ರ ಮಾರ್ಚ್ ತಿಂಗಳ 12ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ: 14 ಎಂಬುದಾಗಿ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ (ಭಾಗ-IVA) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ ಎಂದಿದೆ.
ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025
ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರಡಿ ಆರ್ಜಿಸಿರುವ ಬೆಂಗಳೂರು ಅರಮನೆಯ ಭೂ ಬಳಕೆ ಮತ್ತು ನಿಯಂತ್ರಣ ಹಾಗೂ ಬೆಂಗಳೂರು ಅರಮನೆಗೆ ಸಂಬಂಧಿಸಿರುವ, ಈಗ ಕರ್ನಾಟಕ ರಾಜ್ಯದೊಂದಿಗೆ ನಿಹಿತವಾಗಿರುವ ಭೂಮಿಯ ನಷ್ಟಪರಿಹಾರವನ್ನು ನಿರ್ಧರಿಸಲು ಒಂದು ಅಧಿನಿಯಮ.
ಬೆಂಗಳೂರು ಅರಮನೆಯ ಒಟ್ಟಾರೆ ವ್ಯಾಪ್ತಿಯ 472 ಎಕರೆಗಳು ಮತ್ತು 16 ಗುಂಟೆಗಳ ಒಟ್ಟು ಮೌಲ್ಯವನ್ನು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 8 ಮತ್ತು 9ನೇ ಪಕರಣಗಳ ಅನುಸಾರವಾಗಿ ಹನ್ನೊಂದು ಕೋಟಿ ರೂಪಾಯಿಗಳೆಂದು ನಿರ್ಧರಿಸಲಾಗಿರುವುದರಿಂದ;
ಮತ್ತು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಸಾಂವಿಧಾನಿಕ ಸಿಂಧುತ್ವವನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಎತ್ತಿಹಿಡಿದಿರುವುದರಿಂದ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೂಲಕ ಅಪೀಲಿನಲ್ಲಿ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಕಾರ್ಯಾಚರಣೆಯ ಮೇಲೆ ಯಾವುದೇ ತಡೆಯಾಜ್ಞೆ ಇಲ್ಲದಿರುವುದರಿಂದ;
ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯವು 2021ರ ನ್ಯಾಯಾಂಗ ನಿಂದನಾ ಪ್ರಕರಣ ಸಂ 688 ಇತ್ಯಾದಿಯಲ್ಲಿನ ದಿನಾಂಕ:10.12.2024ರ ತೀರ್ಪಿನ ಮೂಲಕ ರಸ್ತೆ ಅಗಲೀಕರಣದ ಉದ್ದೇಶಕ್ಕಾಗಿ ಗುರುತಿಸಲಾದ ಬೆಂಗಳೂರು ಅರಮನೆಯ ಭಾಗದ ಮೌಲ್ಯವನ್ನು ನಿರ್ಣಯಿಸಿ, ಕರ್ನಾಟಕ ಸ್ಟ್ಯಾಂಪು ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 34)ರ 45ಬಿ ಪ್ರಕರಣದ ಪುಕಾರ ಅಕ್ಕಪಕ್ಕದ ಪ್ರದೇಶಗಳ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಸಾರವಾಗಿ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನು ಮಂಜೂರು ಮಾಡುವಂತೆ ನಿರ್ದೇಶಿಸಿರುವುದರಿಂದ;
ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಹಾಗೂ ಬೆಂಗಳೂರು ನಗರದ ನಗರ ಯೋಜನೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುವುದರಿಂದ, ಮುಂದುವರೆದು ಇದು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಅನುಸಾರ ನಿರ್ಧರಿಸಲಾದ ಒಟ್ಟು ನಷ್ಟ ಪರಿಹಾರಕ್ಕೆ ಸುಸಂಗತವಾಗದಿರುವುದರಿಂದ;
ಮತ್ತು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸಿವಿಲ್ ಅಪೀಲುಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪರ್ಯಾಲೋಚನೆಗೆ ಬಾಕಿಯಿರುವುದರಿಂದ, ಮತ್ತು ಅಭಿವೃದ್ಧಿ ಹಕ್ಕುಗಳ ವರ್ಗಾವಣೆಯು ವಿಪರ್ಯಯಗೊಳ್ಳದಿರುವ ಪ್ರಕ್ರಿಯೆಯಾಗಿದ್ದು, ಅದು ರಾಜ್ಯದ ಮೇಲೆ ತೀವ್ರ ಸಂಕೀರ್ಣ ಪರಿಣಾಮವನ್ನು (ramification) ಬೀರುವುದರಿಂದ;
ಇದು ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-
1. ಸಂಕ್ಷಿಪ್ತ ಹೆಸರು, ಅನ್ವಯ ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025 ಎಂದು ಕರೆಯತಕ್ಕದ್ದು. (2) ಈ ಅಧಿನಿಯಮವು ಬೆಂಗಳೂರು ಅರಮನೆಗೆ ಅನ್ವಯವಾಗತಕ್ಕದ್ದು. (3) ಇದು 2025ರ ಜನವರಿ 27ನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು. 2. ಪರಿಭಾಷೆಗಳು. ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಬೆಂಗಳೂರು ಅರಮನೆ” ಯು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ ಖಂಡ (2)ರಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.
(ಬಿ) “ಮೂಲಸೌಕರ್ಯ ಯೋಜನೆ”ಯು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಯನ್ನು ಒಳಗೊಳ್ಳತಕ್ಕದ್ದು
(ಸಿ) “ಕೇಮುದಾರರು” ಎಂಬುದು,-
(1) ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ (5) ನೇ ಖಂಡದಲ್ಲಿ ಪರಿಭಾಷಿಸಲಾದಂತೆ “ಕಾನೂನುಸಮ್ಮತ ಪ್ರತಿನಿಧಿಗಳು ಮತ್ತು “ವಾರಸುದಾರರು” ಎಂಬ; ಹಾಗೂ
(ii) ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ (6) ನೇ ಖಂಡದಲ್ಲಿ ಪರಿಭಾಷಿಸಲಾದಂತೆ “ಇತರರು” “ಇತರ ವ್ಯಕ್ತಿಗಳು” ಮತ್ತು “ಇತರ ಹಿತಾಸಕ್ತ ವ್ಯಕ್ತಿಗಳು” ಎಂಬ, ಅದೇ ಅರ್ಥವನ್ನು ಹೊಂದಿರತಕ್ಕದ್ದು;
(ಡಿ) “ನಷ್ಟಪರಿಹಾರ”ವು ಸಂದಾಯ ಮಾಡಬಹುದಾದ ಯಾವುದೇ ಮೊತ್ತವನ್ನು ಒಳಗೊಳ್ಳತಕ್ಕದ್ದು ಮತ್ತು ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನೂ ಸಹ ಒಳಗೊಳ್ಳತಕ್ಕದ್ದು.
(ಇ) ಕಮೀಷನರ್” ಎಂಬುದು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ (4)ನೇ ಖಂಡದಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.
(ಎಫ್) “ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು” ಎಂಬುದು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು, 2016ರೊಂದಿಗೆ ಓದಿಕೊಂಡಂತೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ
ಅಧಿನಿಯಮ 11)ರ 14ಬಿ ಪ್ರಕರಣದ (28)ನೇ ಉಪ ಪ್ರಕರಣದ (ಕೆ) ಖಂಡದಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.
(ಜಿ) “ರಾಜ್ಯ ಸರ್ಕಾರ” ಎಂದರೆ ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಕರ್ನಾಟಕ ಸರ್ಕಾರದ ಅಂಗಮಾಧ್ಯಮಗಳನ್ನೂ (instrumentalities) ಒಳಗೊಳ್ಳತಕ್ಕದ್ದು.
3. ಮೂಲಸೌಕರ್ಯ ಯೋಜನೆಗಾಗಿ ಭೂಮಿಯ ಬಳಕೆ. (1) ಯಾವುದೇ ಮೂಲಸೌಕರ್ಯ ಯೋಜನೆಯ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 4ನೇ ಪ್ರಕರಣದಲ್ಲಿ ಬೆಂಗಳೂರು ಅರಮನೆಯ ಯಾವುದೇ ಭಾಗವನ್ನು ಬಳಸಲು ಅಧಿಕಾರವನ್ನು ಬರುವ ಹೊಂದಿರತಕ್ಕದ್ದು,
(2) ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶ ಅಥವಾ ರಾಜ್ಯ ಸರ್ಕಾರವು ಈ ಮೊದಲು ತೆಗೆದುಕೊಂಡ ಯಾವುದೇ ತೀರ್ಮಾನದಲ್ಲಿ ಏನೇ ಇದ್ದರೂ, ರಾಜ್ಯ ಸರ್ಕಾರವು (1)ನೇ ಉಪಪಕರಣದಲ್ಲಿನ ಯಾವುದೇ ಮೂಲಸೌಕರ್ಯ ಯೋಜನೆಗೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಮುಂದುವರೆಯದಿರಲು ಅಧಿಕಾರವನ್ನು ಹೊಂದಿರತಕ್ಕದ್ದು ಎಂದು ತಿಳಿಸಿದೆ.
ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: ಡಿಸಿಗಳಿಗೆ ಸೂಚನೆ ನೀಡಿದ್ದೇನೆ: ಸಿಎಂ ಸಿದ್ಧರಾಮಯ್ಯ
BREAKING : ಸೌಜನ್ಯ ಅತ್ಯಾಚಾರ, ಕೊಲೆ ಕೇಸ್ : ಯೂಟ್ಯೂಬರ್ ಸಮೀರ್ ವಿರುದ್ಧದ ‘FIR’ ಗೆ ಹೈಕೋರ್ಟ್ ತಡೆ
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ :ರೈಲ್ವೆಯಲ್ಲಿ 1,003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Jobs Alert