ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟ ನಡೆಯುತ್ತಿದೆ. ಅಲ್ಲದೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟಿರೋದು ನಿಮ್ಮೆಲ್ಲರಿಗೂ ತಿಳಿದಿದೆ. ಹಾಗಾದ್ರೆ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಇನ್ ಸೈಟ್ ಸ್ಟೋರಿ ಏನು ಎನ್ನುವ ಬಗ್ಗೆ ಮುಂದೆ ಓದಿ.
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಪ್ರಮಖ ಬೇಡಿಕೆಗಳು ಏನು?
1. 2020 ರಿಂದ 15% ವೇತನ ಹೆಚ್ಚಳವಾಗಿರುವ , ಪರಿಷ್ಕರಣೆಯ 38 ತಿಂಗಳುಗಳ ಬಾಕಿ ಹಣ ಪಾವತಿ ಮಾಡಬೇಕು.
2. 2024 ರಿಂದ ಜಾರಿಗೆ ಬರುವಂತೆ ದಿನಾಂಕ 31-12-2023 ರಲ್ಲಿನ ಮೂಲವೇತನಕ್ಕೆ 25% ಏರಿಕೆ ಮಾಡಿ ವೇತನ ಹೆಚ್ಚಳ ನೀಡಬೇಕು.
ಇದರೊಂದಿಗೆ ಮತ್ತೊಂದು ತದ್ವಿರುದ್ಧವಾದ ನಿಲುವು ತಳೆದಿರುವುದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಒಕ್ಕೂಟ, ಸದರಿ ಸಂಘಟನೆಯು ನಮಗೆ 4 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡುವ ಪದ್ಧತಿ ಕಡ್ಢಾಯವಾಗಿ ನಿಲ್ಲಬೇಕು. ಸರ್ಕಾರಿ ನೌಕರರಿಗೆ ಸಮಾನವಾದ ವೇತನ ನೀಡಬೇಕು. ಕಾರ್ಮಿಕ ಸಂಘಟನೆಗಳಿಗೆ ಚುನಾವಣೆ ನಡೆಸಬೇಕು ಎಂಬುದಾಗಿ ಬೇಡಿಕೆ ಸಲ್ಲಿಸಿದ್ದು, ಈ ಸಂಘಟನೆಯ ಬೇಡಿಕೆಗೂ ಮುಷ್ಕರಕ್ಕೆ ಕರೆನೀಡಿರುವ ಸಂಘಟನೆಯ ಬೇಡಿಕೆಗಳು ಸಂಪೂರ್ಣ ತದ್ವಿರುದ್ಧವಾಗಿರುವುದರಿಂದ ಸರ್ಕಾರಕ್ಕೆ ಹೊಸ ತಲೆಬಿಸಿಯಾಗಿದೆ.
ನೌಕರರ ಸಂಘಟನೆಗಳಲ್ಲಿಯೇ ವಿಭಿನ್ನ ಬೇಡಿಕೆಗಳಿದ್ದು, ಅವುಗಳನ್ನು ಸರ್ಕಾರ ಯಾವ ರೀತಿ ಇತ್ಯರ್ಥಪಡಿಸಬೇಕೆಂಬುದಕ್ಕೆ ಉತ್ತರ ಯಾರ ಬಳಿಯೂ ಇಲ್ಲವಾಗಿದೆ ಎಂಬುದು ಸಂಘದ ಉನ್ನತ ಮೂಲಗಳಿಂದ ತಿಳಿದು ಬಂದ ಅಳಲಾಗಿದೆ.
ಸಾರಿಗೆ ನೌಕರರ ಕುರಿತಂತೆ ರಾಜ್ಯ ಸರ್ಕಾರದ ನಿಲುವು ಏನು?
ಸಾರಿಗೆ ಸಿಬ್ಬಂದಿಗಳ ಶ್ರಮ ಮತ್ತು ಬದ್ಧತೆ ಪ್ರಶ್ನಾತೀತ. ಸಾರಿಗೆ ಸಂಸ್ಥೆಗಳ ಅಭಿವೃದ್ಧಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ಕೋವಿಡ್ ಸಮಯದಲ್ಲಿ ಪೂರ್ಣ / ಅಪೂರ್ಣ ಪ್ರಮಾಣದಲ್ಲಿ ಬಸ್ಸುಗಳ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಕಾರಣ, ನಾಲ್ಕು ಸಾರಿಗೆ ಸಂಸ್ಥೆಗಳ ಸಮಸ್ತ ಸಿಬ್ಬಂದಿಗಳ ವೇತನ ಹಾಗೂ ಇತರೆ ಭತ್ಯೆಗಳನ್ನು ಸರ್ಕಾರ ಪಾವತಿ ಮಾಡಿದೆ.
ಈ ಕಾರಣದಿಂದಾಗಿ 2023 ರ ಮಾರ್ಚ್ 17 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಿ ಸರ್ಕಾರವು ಆದೇಶ ಹೊರಡಿಸಿದೆ. ಆರ್ಥಿಕ ನಿಯಮಾವಳಿಯಂತೆ ಅದಕ್ಕೆ Notional ( ಕಾಲ್ಪನಿಕ) ಆಗಿ 15% ವೇತನ ಏರಿಕೆಯನ್ನು ಪ್ರತಿ ತಿಂಗಳ ಇಂಕ್ರಿಮೆಂಟ್ ದರ ಇದಕ್ಕೆ ಅನ್ವಯಿಸಿಕೊಂಡು ವೇತನವನ್ನು 2023 ರಿಂದ ಜಾರಿಗೆ ಬರುವಂತೆ ನೀಡಲಾಗಿದೆ. ಅಂದರೆ 2023 ರಿಂದ 2027 ರವರೆಗೆ ನಾಲ್ಕು ವರ್ಷಗಳ ಅವಧಿಯವರೆಗೂ ಇದು ಅನ್ವಯವಾಗುತ್ತದೆ.
2020 ರಿಂದ ಅನ್ವಯವಾಗುವಂತಿದ್ದರೆ ಇದಕ್ಕಾಗಿ ಯಾವುದೇ ಪ್ರತ್ಯೇಕ ನಿಧಿಯನ್ನು ಹಿಂದಿನ ಸರ್ಕಾರ ಹಂಚಿಕೆ ಮಾಡಿರುವುದಿಲ್ಲ. ಮತ್ತು ಸರ್ಕಾರದ ಆದೇಶದಲ್ಲಿ ಎಲ್ಲಿಯೂ 2020 ರಿಂದ ಎಂಬುದರ ಬಗ್ಗೆ ಉಲ್ಲೇಖವಿರುವುದಿಲ್ಲ. ಏಕ ಸದಸ್ಯ ಸಮಿತಿಯು ಎಷ್ಟು ತಿಂಗಳ ಬಾಕಿ ನೀಡಬೇಕು ಎಂದು ತಿಳಿಸುವುದು ಎಂಬುದನ್ನು ಮಾತ್ರ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದಿನ ಎಲ್ಲಾ ಸರ್ಕಾರಿ ಆದೇಶಗಳಲ್ಲಿಯೂ 2012-2016 ರವರೆಗೆ ವೇತನ ಹೆಚ್ಚಳ ಮಾಡಿದಾಗ 2012 ರಿಂದ ಎಂಬುದಾಗಿ, 2016-2020 ರವರೆಗೆ ವೇತನ ಹೆಚ್ಚಳ ಮಾಡಿದಾಗ 2016 ರಿಂದ ಜಾರಿಗೆ ಬರುವಂತೆ ಎಂದೇ ಸರ್ಕಾರದ ಆದೇಶದಲ್ಲಿ ನಮೂದಾಗಿರುತ್ತದೆ. 2023 ರ ಆದೇಶದಲ್ಲಿ ಮಾತ್ರ 2023 ಮಾರ್ಚ್ ರಿಂದ ಅನ್ವಯವಾಗುವಂತೆ ಎಂದು ನಮೂದಾಗಿದ್ದು, 2020 ರಿಂದ ಜಾರಿಗೆ ಬರುವಂತೆ ಎಂದು ಆದೇಶದಲ್ಲಿ ತಿಳಿಸಿರುವುದಿಲ್ಲ ಎಂಬುದು ರಾಜ್ಯ ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿರುವಂತ ವಾದವಾಗಿದೆ.
ಈ ಹಿಂದಿನ ಸರ್ಕಾರದ ಆದೇಶವನ್ನು ನಾವು ಈಗ ಯಾವ ಮಾನದಂಡದ ಮೇಲೆ ಮಾರ್ಪಡಿಸಲು ಸಾಧ್ಯ, ಅದು ತಪ್ಪಾಗುತ್ತದೆ. ಯಾವುದೇ ಸರ್ಕಾರವು ಆದೇಶ ಹೊರಡಿಸಿದ್ದರೂ ಕೆಲವೊಂದು ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಹೊರಡಿಸಲಾಗಿರುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ಎನ್ನುವುದು ಸರ್ಕಾರದ ನಿಲುವು ಎನ್ನಲಾಗುತ್ತಿದೆ.
ಅದರಲ್ಲಿಯೂ ಪ್ರಮುಖವಾಗಿ 15% ವೇತನ ಹೆಚ್ಚಳ ಸಾರಿಗೆ ನೌಕರರಿಗೆ ಈ ಎಲ್ಲಾ ವೇತನ ಪರಿಷ್ಕರಣೆ ಅತೀ ಹೆಚ್ಚು, ಸರ್ಕಾರವು ಮೂರು ವರುಷ ತಡವಾಗಿ ವೇತನ ಪರಿಷ್ಕರಣೆ ಮಾಡಿದ್ದರಿಂದ ಇದನ್ನು ಮನಗಂಡು ಇಷ್ಟೊಂದು ಏರಿಕೆ ನೀಡಿರುತ್ತದೆ. ಹಾಗೂ ಸರಕಾರಿ ನೌಕರರಿಗೆ 5 ವರುಷಕ್ಕೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಮಾಡಿದಾಗಲೂ ಸಹ ವೇತನ ಏರಿಕೆ ಜಾರಿ ಹಿಂದಿನಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ನೀಡುವುದಿಲ್ಲ, ಮುಂದಿನ ದಿನದಿಂದ ಜಾರಿಗೆ ಬರುವಂತೆ ಎಂದೇ ಆದೇಶ ಹೊರಡಿಸಲಾಗಿದೆ.
ಆದ್ದರಿಂದ ಪ್ರಸ್ತುತ ಸಾರಿಗೆ ನೌಕರರ ಬೇಡಿಕೆನುಸಾರ 2024 ರಿಂದ ವೇತನ ಹೆಚ್ಚಳ ನೀಡಬೇಕೆಂದು ಸಾಧ್ಯವಿಲ್ಲ, ಏಕೆಂದರೆ Notional (ಕಾಲ್ಪನಿಕ) ಆಗಿ 15% ವೇತನ ಏರಿಕೆಯನ್ನು 31-12-2019 ರಿಂದ ಇಂಕ್ರಿಮೆಂಟ್ ದರಕ್ಕೆ ಅನ್ವಯಿಸಿಕೊಂಡು ವೇತನವನ್ನು 2023 ರ ಮಾರ್ಚ ನಿಂದ ಜಾರಿಗೆ ಬರುವಂತೆ ಮಾಡಿರುವುದರಿಂದ ನೌಕರರಿಗೆ ಆರ್ಥಿಕವಾಗಿ ಎಲ್ಲಾ ಸೌಲಭ್ಯಗಳಿಗೂ ಇದು ಅನ್ವಯವಾಗಿದೆ. ಆದ್ದರಿಂದ 2027 ರಿಂದಲೇ ಮುಂದಿನ ವೇತನ ಪರಿಷ್ಕರಣೆ ಜಾರಿಯಾಗಲು ಸಾಧ್ಯ ಎಂಬುದು ಸರ್ಕಾರದ ಸ್ಪಷ್ಟವಾದ ನಿಲುವು ಎಂಬುದಾಗಿ ಮೂಲಗಳ ಮಾಹಿತಿ.
ಇನ್ನೂ ಆರೇಳು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ನೇಮಕಾತಿಗೆ ಚಾಲನೆ ನೀಡಿದ್ದೇವೆ. 10,000 ಹೊಸ ನೇಮಕಾತಿ, ಇದರಲ್ಲಿ 8 ವರ್ಷಗಳಿಂದ ಅನುಕಂಪದ ಆಧಾರದ ನೌಕರಿ ನೀಡದಿರುವ 1000 ಮೃತ ಅವಲಂಬಿತರು ಇದ್ದಾರೆ. 5200 ಹೊಸ ಬಸ್ಸುಗಳ ಸೇರ್ಪಡೆ ಮಾಡಲಾಗಿದೆ. ಶಕ್ತಿ ಯೋಜನೆಯಿಂದ ನಿಗಮಗಳಿಗೆ ನಿಜಕ್ಕೂ ಆದಾಯ ಹೆಚ್ಚಳವಾಗಿದೆ, 65% ಪ್ರಯಾಣಿಕರು ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಸಾರಿಗೆ ನಿಗಮಗಳನ್ನು ಸದೃಢಗೊಳಿಸಲು ನಾವು ಕ್ರಮವಹಿಸುತ್ತಿದ್ದೇವೆ ಎನ್ನುವುದು ಸರ್ಕಾರದ ವಾದ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ಸಾರಿಗೆ ನೌಕರರು ಸರ್ಕಾರಿ ನೌಕರರಲ್ಲ, ಸಾರಿಗೆ ನಿಗಮಗಳ ರೀತಿ ಸರ್ಕಾರದಡಿಯಲ್ಲಿ 62 ಕ್ಕೂ ಹೆಚ್ಚು ನಿಗಮ/ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಸಾರಿಗೆ ನೌಕರರ ಬೇಡಿಕೆ ಏನಿದ್ದರೂ ನೀತಿ/ ನಿಯಮ ಕಾನೂನಿನ ಚೌಕಟ್ಟಿನಡಿಯಲ್ಲಿ ಇತ್ಯರ್ಥವಾಗಬೇಕು. ಮುಷ್ಕರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈಗಾಗಲೇ ಕಳೆದ ಮುಷ್ಕರದ ಸಮಯದಲ್ಲಿ ವಜಾಗೊಂಡ ಸಾವಿರಾರು ನೌಕರರು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ. ಆದ್ದರಿಂದ ಕಾರ್ಮಿಕ ಸಂಘಟನೆಗಳು ನೌಕರರ ಹಿತದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ಯೋಚಿಸಿ ಮುಂದಡಿ ಇಡುವರೇ ಎಂಬುದನ್ನು ಕಾದು ನೋಡಬೇಕಿದೆ.
ಹಾಸನ–ಬಂಟವಾಳ ರೈಲು ವಿಭಾಗಗಳಲ್ಲಿ ಮೈಸೂರು ವಿಭಾಗೀಯ ‘ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್’ ಪರಿಶೀಲನೆ
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು