ನವದೆಹಲಿ: ದೇಶದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯಾದ ‘ಗರ್ಭಕಂಠದ ಕ್ಯಾನ್ಸರ್’ (Cervical Cancer) ತಡೆಗಟ್ಟಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ದೇಶಾದ್ಯಂತ 14 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಹೆಚ್‌ಪಿವಿ (HPV – Human Papillomavirus) ಲಸಿಕೆಯನ್ನು ನೀಡಲು ನಿರ್ಧರಿಸಿದೆ.
ಏನಿದು ಹೆಚ್‌ಪಿವಿ ಲಸಿಕೆ? ಇದರ ವಿಶೇಷತೆ ಏನು?
ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗುವ ಹೆಚ್‌ವಿಪಿ ಟೈಪ್ 16, 18, 6 ಮತ್ತು 11 ರೋಗಾಣುಗಳ ವಿರುದ್ಧ ಈ ಲಸಿಕೆ ರಕ್ಷಣೆ ನೀಡುತ್ತದೆ. ನಾಲ್ಕು ವಿಧದ ಕ್ಯಾನ್ಸರ್ ಕಾರಕ ವೈರಸ್‌ಗಳನ್ನು ತಡೆಯುವ ಸಾಮರ್ಥ್ಯ ಈ ಲಸಿಕೆಗಿದ್ದು, ಇದನ್ನು ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲಕ ಉಚಿತವಾಗಿ ವಿತರಿಸಲಾಗುತ್ತದೆ.
2030ರ ವೇಳೆಗೆ ಕ್ಯಾನ್ಸರ್ ಮುಕ್ತ ಭಾರತದ ಗುರಿ
2030ರ ವೇಳೆಗೆ ಭಾರತದಲ್ಲಿ ಯಾವುದೇ ಮಹಿಳೆ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಈ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಸಂಶೋಧನೆಯ ವರದಿ: 30 ವರ್ಷದೊಳಗಿನ ಮಹಿಳೆಯರು ಈ ಲಸಿಕೆ ಪಡೆಯುವುದರಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಅಂತರಾಷ್ಟ್ರೀಯ ಸಂಶೋಧನೆಗಳು ತಿಳಿಸಿವೆ.
ಒಂದೇ ಡೋಸ್ ಸಾಕು: ಇತ್ತೀಚಿನ ವರದಿಗಳ ಪ್ರಕಾರ, ಕೇವಲ ಒಂದು ಡೋಸ್ ಲಸಿಕೆ ಕೂಡ ಈ ಕ್ಯಾನ್ಸರ್ ತಡೆಗಟ್ಟಲು ಪರಿಣಾಮಕಾರಿಯಾಗಿದೆ.
ರಾಜ್ಯಗಳ ಸಾಧನೆ ಮತ್ತು ಮುಂದಿನ ಹಾದಿ
ತಮಿಳುನಾಡು ಪ್ರಥಮ: ದೇಶದಲ್ಲೇ 14 ವರ್ಷದ ಎಲ್ಲಾ ಹೆಣ್ಣುಮಕ್ಕಳಿಗೆ ಲಸಿಕೆ ನೀಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ತಮಿಳುನಾಡು ಪಾತ್ರವಾಗಿದೆ.
ಆತಂಕಕಾರಿ ಅಂಕಿ-ಅಂಶಗಳು
ವಿಶ್ವದಲ್ಲೇ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ.
ಪ್ರಸ್ತುತ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 15 ಲಕ್ಷ ಮಹಿಳೆಯರು ಕ್ಯಾನ್ಸರ್ ಬಾರಿನ ಬೀಳುತ್ತಿದ್ದಾರೆ.
2040ರ ವೇಳೆಗೆ ಈ ಸಂಖ್ಯೆ 20 ಲಕ್ಷಕ್ಕೆ ಏರುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರವು ಉಚಿತ ವ್ಯಾಕ್ಸಿನೇಷನ್ ಮೂಲಕ ಹೆಣ್ಣುಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಮುಂದಾಗಿದೆ.








