ಬೆಂಗಳೂರು: ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಆರೋಗ್ಯ ಇಲಾಖೆಯ ವಿವಿಧ ವೃಂದಗಳ ಸಂಘಟನೆಗಳು ಒಗ್ಗೂಡಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೋರಾಟದ ಹಂತಗಳು:
ಫೆಬ್ರವರಿ 13ರಂದು ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಕೆಳಗಿನಂತೆ ಪ್ರತಿಭಟಿಸಲು ತೀರ್ಮಾನಿಸಲಾಗಿದೆ:
ಮಾರ್ಚ್ 11 ರಿಂದ ಮಾರ್ಚ್ 15: ವೈದ್ಯರು ಮತ್ತು ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಅವಧಿಯಲ್ಲಿ ಹೊರರೋಗಿ ಸೇವೆ (OPD) ಇರುವುದಿಲ್ಲ, ಕೇವಲ ತುರ್ತು ಸೇವೆಗಳು ಮಾತ್ರ ಲಭ್ಯವಿರುತ್ತವೆ.
ಮಾರ್ಚ್ 16 ರಿಂದ: ರಾಜ್ಯಾದ್ಯಂತ ಎಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ.
ಪ್ರಮುಖ ಬೇಡಿಕೆಗಳು:
ಆರೋಗ್ಯ ಇಲಾಖೆಯಲ್ಲಿನ ವ್ಯವಸ್ಥಿತ ಲೋಪದೋಷಗಳನ್ನು ಸರಿಪಡಿಸಲು ಸಂಘಟನೆಯು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ:
ಸರ್ಕಾರಿ ಆಸ್ಪತ್ರೆಗಳಿಗೆ ಸರಿಯಾದ ಸಮಯಕ್ಕೆ ಔಷಧಿ ಸರಬರಾಜು ಮಾಡುವುದು.
1973ರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವುದು.
ಕಳೆದ 5 ವರ್ಷಗಳಿಂದ ಬಾಕಿ ಇರುವ ಬಡ್ತಿ (Promotion) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು.
ಖಾಲಿ ಇರುವ ವೈದ್ಯರ ಮತ್ತು ಸಿಬ್ಬಂದಿಗಳ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು.
ಗುತ್ತಿಗೆ ಹಾಗೂ ಎನ್.ಹೆಚ್.ಎಂ (NHM) ನೌಕರರಿಗೆ ಸೇವಾ ಭದ್ರತೆ ಮತ್ತು ವೇತನ ಹೆಚ್ಚಳ ಒದಗಿಸುವುದು.
ವರ್ಗಾವಣೆ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು.
“ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಮುಷ್ಕರದಿಂದಾಗಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆಗೆ ಭಾರೀ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯದ ಅಡಿಪಾಯವೇ ಸಾಮಾಜಿಕ ನ್ಯಾಯ: ಗೃಹ ಸಚಿವ ಡಾ.ಜಿ ಪರಮೇಶ್ವರ್
ಪತ್ನಿ ನಿರುದ್ಯೋಗಿಯಲ್ಲ, ಪತಿ ಗಳಿಸುವ ಪ್ರತಿ ರೂಪಾಯಿಯಲ್ಲೂ ಆಕೆಯ ಬೆವರಿನ ಪಾಲಿದೆ: ಹೈಕೋರ್ಟ್








