ಬೆಂಗಳೂರು : ಹೀರೋ ಫ್ಯೂಚರ್ಸ್ ಎನರ್ಜಿಸ್ ನವರಿಂದ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ರೂ. 11,000 ಕೋಟಿ ಹೂಡಿಕೆ ಮಾಡಲಿದ್ದು, 3, 000 ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಹೀರೊ ಫ್ಯೂಚರ್ ಎನರ್ಜೀಸ್, ಕರ್ನಾಟಕದಲ್ಲಿ ನವೀಕರಿಸಬಲ್ಲ ಇಂಧನ, ಗ್ರೀನ್ ಹೈಡ್ರೋಜೆನ್, ಹಾಗೂ ಇತರೆ ಪೂರಕ ಯೋಜನೆಗಳು ಒಳಗೊಂಡಂತೆ ರೂ.11,000 ಕೋಟಿ ಮೊತ್ತದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಿದ್ದಾರೆ.
ಇನ್ವೆಸ್ಟ್ ಕರ್ನಾಟಕ 2025 ರೋಡ್’ಮ್ಯಾಪ್’ನ ಭಾಗವಾಗಿರುವ ಈ ಪ್ರಮುಖ ಹೂಡಿಕೆಯು ರಾಜ್ಯದಲ್ಲಿ 3,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದು, ಜೊತೆಗೆ ಡೀಕಾರ್ಬನೈಸೇಷನ್ ಉತ್ತೇಜಿಸಿ, ಕರ್ನಾಟಕವನ್ನು ಸ್ವಚ್ಛ ಇಂಧನ ಕ್ಷೇತ್ರದಲ್ಲಿ ನಂ. 1 ಸ್ಥಾನದಲ್ಲಿ ನಿಲ್ಲಿಸಲಿದೆ ಎಂದರು.