ಬೆಂಗಳೂರು: ಮುಂದಿನ 2026-27ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 8 ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ (ಎಂಡಿ/ಎಂಎಸ್) ಕೋರ್ಸ್‌ಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಮೇಲೆ ಓದಲಾದ ಆಯುಕ್ತಾಲಯದ ಏಕ ಕಡತದಲ್ಲಿ, ರಾಷ್ಟ್ರೀಯ ವೈದ್ಯಕೀಯ ಆಯೋಗ (National Medical Commission) ಪ್ರಕಟಿಸಿರುವ ‘ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ನಿಯಮಾವಳಿ 2023’ (PGMER-2023) ಹಾಗೂ ‘ಸ್ನಾತಕೋತ್ತರ ಪಠ್ಯಕ್ರಮಗಳ ಕನಿಷ್ಠ ಮಾನದಂಡದ ಅವಶ್ಯಕತೆಗಳು 2023’ (PGMSR-2023) ರನ್ವಯ ಕನಿಷ್ಠ 220 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು ನಿಗಧಿಪಡಿಸಲಾದ ನಿಯಮಗಳನ್ನು ಪೂರೈಸಿದಲ್ಲಿ ಪದವಿ ಪೂರ್ವ (Under Graduate) ವೈದ್ಯಕೀಯ ಕಾಲೇಜು ಜೋಡಣೆ ಇಲ್ಲದಿದ್ದರೂ ಸಹ MD/MS ಕೋರ್ಸ್‌ಗಳನ್ನು ಪ್ರಾರಂಭಿಸಲು ಅರ್ಹವಾಗಿರುತ್ತವೆ.
ಈ ಹಿನ್ನೆಲೆಯಲ್ಲಿ, ಜಿಲ್ಲಾ ಆಸ್ಪತ್ರೆಗಳಲ್ಲಿ MD/MS ಪಠ್ಯಕ್ರಮಗಳನ್ನು ಪ್ರಾರಂಭಿಸುವುದರಿಂದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು ತೃತೀಯ ಹಂತದ ಕೇಂದ್ರಗಳಿಂದ ವಿಕೇಂದ್ರೀಕರಣಗೊಳಿಸುವುದು ಸಾಧ್ಯವಾಗುತ್ತದೆ. ಇದರಿಂದ ಸರ್ಕಾರಿ ಸೇವೆಯಲ್ಲಿ ತಜ್ಞ ವೈದ್ಯರ ಸಂಖ್ಯೆ ಹೆಚ್ಚಿಸಲು, ಜಿಲ್ಲಾ ಮಟ್ಟದ ದ್ವಿತೀಯ ಹಂತದ ಆರೈಕೆ ಹಾಗೂ ಶೈಕ್ಷಣಿಕ ಸಾಮರ್ಥ್ಯ ಬಲಪಡಿಸಿಕೊಳ್ಳಲು, ರಾಷ್ಟ್ರೀಯ ವೈದ್ಯಕೀಯ ಆಯೋಗದ District Residency Programme (DRP) ನ ಉದ್ದೇಶವನ್ನು ಈಡೇರಿಸಲು ಹಾಗೂ ಹೊರವಲಯದ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ, ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುವುದರ ಜೊತೆಗೆ ರಾಷ್ಟ್ರ ಮಟ್ಟದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಅಭಿವೃದ್ಧಿಯ ಸರ್ಕಾರದ ನೀತಿಗೆ ಹೊಂದಾಣಿಕೆ ಗೊಳಿಸಲು ಸಾದ್ಯವಾಗುತ್ತದೆ.
ಅದರನ್ವಯ, ಈ ಕೆಳಕಂಡ ಎಂಟು ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು 2026-27ನೇ ಶೈಕ್ಷಣಿಕ ವರ್ಷದಿಂದ ಎಂಡಿ/ಎಂಎಸ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅರ್ಹವಾಗಿರುತ್ತವೆ:
ಜಿಲ್ಲಾ ಆಸ್ಪತ್ರೆ, ವಿಜಯಪುರ.
ಜಿಲ್ಲಾ ಆಸ್ಪತ್ರೆ, ಬಾಗಲಕೋಟೆ.
ಜಿಲ್ಲಾ ಆಸ್ಪತ್ರೆ, ತುಮಕೂರು.
ಜಿಲ್ಲಾ ಆಸ್ಪತ್ರೆ, ಕೋಲಾರ.
ಸರ್ಕಾರಿ ಆಸ್ಪತ್ರೆ, ಜಯನಗರ, ಬೆಂಗಳೂರು.
ಕೆ.ಸಿ. ಜನರಲ್ ಆಸ್ಪತ್ರೆ, ಬೆಂಗಳೂರು.
ಜಿಲ್ಲಾ ಆಸ್ಪತ್ರೆ, ರಾಮನಗರ.
ಜಿಲ್ಲಾ ಆಸ್ಪತ್ರೆ, ಮೈಸೂರು.
ಈ ಹಿನ್ನೆಲೆಯಲ್ಲಿ, ಈ ಉಪಕ್ರಮದ ಸಂಪೂರ್ಣ ಸಂಯೋಜನೆ ಮತ್ತು ಅನುಷ್ಠಾನದ ಜವಬ್ದಾರಿಯನ್ನು ಅಭಿಯಾನ ನಿರ್ದೇಶಕರು ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರು ವಹಿಸಿಕೊಂಡು ಸದರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಆಯುಕ್ತಾಲಯದ ಪ್ರಸ್ತಾವನೆಯನ್ನು ಪರಿಶೀಲಿಸಿದ್ದು, ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಆಕುಕ 464 ಹೆಚ್ ಎಸ್ ಹೆಚ್ 2025.
ಬೆಂಗಳೂರು, ದಿನಾಂಕ: 07-11-2025.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದ ಈ ಕೆಳಕಂಡ ಎಂಟು ಸರ್ಕಾರಿ ಜಿಲ್ಲಾ ಆಸ್ಪತ್ರೆಗಳು 2026-27ನೇ ಶೈಕ್ಷಣಿಕ ವರ್ಷದಿಂದ ಎಂಡಿ/ಎಂಎಸ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅರ್ಹವಾಗಿದ್ದು, ಈ ಉಪಕ್ರಮದ ಸಂಪೂರ್ಣ ಸಂಯೋಜನೆ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರಿಗೆ ವಹಿಸಿದ್ದು, ಸದರಿಯವರು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸತಕ್ಕದ್ದು.
ಈ ಯೋಜನೆಗೆ ಸಂಬಂಧಿಸಿದಂತೆ, ವೈದ್ಯಕೀಯ ಶಿಕ್ಷಣ ಇಲಾಖೆಯು ಬೋಧಕ ವರ್ಗದ ಹುದ್ದೆ ಸಮಾನತೆ (Faculty Equivalence), DNB ಉಪನ್ಯಾಸಕರ ಬಳಕೆ ಹಾಗೂ RGUHS ಮತ್ತು NMC ಮೂಲಕ NOC ಮತ್ತು ಪರಿಶೀಲನೆ (inspection) ಪ್ರಕ್ರಿಯೆಗಳಿಗೆ ಅನುಕೂಲವಾಗುವಂತೆ ಅಗತ್ಯವಾದ ಸ್ಪಷ್ಟಿಕರಣಗಳನ್ನು ನೀಡುತ್ತದೆ.
ಷರತ್ತು ಮತ್ತು ನಿಬಂಧನೆಗಳು:
ಹೊಸದಾಗಿ ಗುರುತಿಸಲಾದ DNB ಕೇಂದ್ರಗಳಾದ ರಾಮನಗರ ಮತ್ತು ಮೈಸೂರು ಜಿಲ್ಲಾ ಆಸ್ಪತ್ರೆಗಳ ಪ್ರಾರಂಭಿಕ ವೆಚ್ಚವನ್ನು ಲಭ್ಯವಿರುವ ARS ಅಥವಾ AB ARK ನಿಧಿಯಿಂದ ಭರಿಸುವುದು.
ಇತರೆ DNB ಯಿಂದ ಮಾನ್ಯತೆ ಪಡೆದ ಆಸ್ಪತ್ರೆಗಳು ಅರ್ಜಿ ಪ್ರಕ್ರಿಯೆಗೆ ಹಾಗೂ ಸಂಬಂಧಿಸಿದ ವೆಚ್ಚಗಳನ್ನು ಪೂರೈಸಲು DNB ವಿದ್ಯಾರ್ಥಿ ಶುಲ್ಕ ಖಾತೆ (Student Fee Account) ಯಲ್ಲಿ ಲಭ್ಯವಿರುವ ಅನುದಾನವನ್ನು ಉಪಯೋಗಿಸುವುದು.









