ಬೆಂಗಳೂರು : ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವ ಜನತೆಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪರಿಷ್ಕರಣೆ ಪೂರ್ಣಗೊಂಡ ಬಳಿಕ ಹೊಸ BPL ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯ ಸದಸ್ಯರಾದ ಡಾ. ಭರತ್ ಶೆಟ್ಟಿ ಅವರ ಪ್ರಶ್ನೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಕೆ.ಹೆಚ್. ಮುನಿಯಪ್ಪ ರವರು ಉತ್ತರ ನೀಡಿದರು.
ಭಾರತದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಮಹಾರಾಷ್ಟ್ರದ ನಂತರ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಇಂತಹ ಅಭಿವೃದ್ಧಿ ಹೊಂದಿದ ರಾಜ್ಯದಲ್ಲಿಯೂ ಸುಮಾರು 70–75% ಜನರು ಬಡತನ ರೇಖೆ (BPL) ಅಡಿಯಲ್ಲಿ ಪಡಿತರ ಕಾರ್ಡ್ ಹೊಂದಿರುವುದು ಪ್ರಶ್ನಾರ್ಹವಾಗಿದೆ. ಇತರ ರಾಜ್ಯಗಳ ಹೋಲಿಕೆ: ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಕೇವಲ 50% ಜನರು ಮಾತ್ರ BPL ಕಾರ್ಡ್ ಹೊಂದಿದ್ದಾರೆ ಎಂದರು.
ನಾಗರಿಕರಿಗೆ ಆರೋಗ್ಯದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 24 ಗಂಟೆ ಲಭ್ಯವಿರುವ ವಿಶೇಷ ಪೋರ್ಟಲ್ ಆರಂಭಿಸಲಾಗಿದೆ. ಈ ಪೋರ್ಟಲ್ ಮುಖಾಂತರ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಕಾರ್ಡ್‌ದಾರರು APL ವರ್ಗದವರು. ಇವರಲ್ಲಿ ಸುಮಾರು ಒಂದು ಲಕ್ಷ ಜನರೂ ಪಡಿತರ ಪಡೆಯಲು ಮುಂದೆ ಬರದ ಕಾರಣ ಅವರಿಗೆ ಅಕ್ಕಿ ವಿತರಣೆ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನಡೆಸಿದ ಪರಿಶೀಲನೆಯಲ್ಲಿ ಸುಮಾರು 13 ಲಕ್ಷ BPL ಕಾರ್ಡ್‌ಗಳು ಅನರ್ಹ ಎಂದು ಕಂಡುಬಂದಿದ್ದು, ಅವುಗಳನ್ನು APL ವರ್ಗಕ್ಕೆ ವರ್ಗಾವಣೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಸದಸ್ಯರ ಸರ್ವಸಮ್ಮತದೊಂದಿಗೆ ಮಾತ್ರ ಪರಿಷ್ಕರಣೆ ಕಾರ್ಯ ಪೂರ್ಣಗೊಳ್ಳುತ್ತದೆ. ಪರಿಷ್ಕರಣೆ ಪೂರ್ಣಗೊಂಡ ಬಳಿಕ ಹೊಸ BPL ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ.ಈ ಕಾರ್ಯದಲ್ಲಿ ಯಾವುದೇ ರೀತಿಯ ರಾಜಕೀಯ ನಡೆಯಬಾರದು ಎಂದು ಸಚಿವರು ಮನವಿ ಮಾಡಿದರು.
ಪರಿಷ್ಕರಣೆಯ ಸಂದರ್ಭದಲ್ಲಿ ಯಾರಾದರೂ ಅರ್ಹ ಫಲಾನುಭವಿಗಳು ಕೈಬಿಟ್ಟಿದ್ದರೆ, ಅವರು ತಹಶೀಲ್ದಾರ್ ಕಚೇರಿಯಲ್ಲಿ ಪುನಃ ಅರ್ಜಿ ಸಲ್ಲಿಸುವ ಮೂಲಕ ಪಡಿತರ ಕಾರ್ಡ್ ಪಡೆಯಲು ಅವಕಾಶ ದೊರೆಯುತ್ತದೆ. ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.