ಬೆಂಗಳೂರು: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 4,500 ಪೊಲೀಸ್ ಕಾನ್ಸ್ಟೇಬಲ್ ಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ‘ಹೈಜಿನ್ ಆನ್ ಗೋ’ ವಾಹನಗಳ ಹಸ್ತಾಂತರ ಹಾಗೂ ಪೊಲೀಸ್ ಇಲಾಖೆಯ ‘ಪ್ರಗತಿಯ ಸ್ತಂಭಗಳು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒಳ ಮೀಸಲಾತಿ ಪ್ರಕ್ರಿಯೆ ಕಾರಣ ಸುಮಾರು 75 ಸಾವಿರ ಹುದ್ದೆ ಭರ್ತಿ ಸಾಧ್ಯವಾಗಿರಲಿಲ್ಲ. ಇದೀಗ ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ನಿರ್ಧಾರ ಅಂತಿಮವಾದಲ್ಲಿ ಎರಡನೇ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ರಾಜ್ಯದಲ್ಲಿ 4500 ಪೊಲೀಸ್ ಕಾನ್ಸ್ಟೇಬಲ್ ಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ನೇಮಕಾತಿ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಬೆಂಗಳೂರು ನಗರದಲ್ಲಿ ಪೊಲೀಸರು ವಿವಿಧ ರೀತಿಯ ಕರ್ತವ್ಯದ ವೇಳೆ ‘ಹೈಜಿನ್ ಆನ್ ಗೋ’ ಸಂಚಾರಿ ಸ್ವಚ್ಛತಾ ಘಟಕಗಳು ಉಪಯುಕ್ತವಾಗಲಿದೆ. ಪುರುಷ ಮತ್ತು ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ಶೌಚಾಲಯ, ಸ್ವಚ್ಛತಾ ಸಾಮಾಗ್ರಿ, ಪ್ರಥಮ ಚಿಕಿತ್ಸೆಯ ಕಿಟ್ ವ್ಯವಸ್ಥೆ ಇರಲಿದೆ.ಮಳೆ, ಚಳಿಯನ್ನು ಲೆಕ್ಕಿಸದೆ ಕರ್ತವ್ಯನಿರ್ವಹಿಸುವ ಪೊಲೀಸರಿಗೆ, ಈ ರೀತಿಯ ಸೌಲಭ್ಯಗಳು ಇನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಉತ್ತೇಜನವಾಗಲಿದೆ. 2 ಕೋಟಿ ರೂ. ಮೊತ್ತದ ಸಂಚಾರಿ ಸ್ವಚ್ಛತಾ ವಾಹನಗಳನ್ನು ನೀಡಿರುವ ರೆನಾಲ್ಟ್ ನಿಸ್ಸಾನ್ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆಯ ಕಾರ್ಯ ಶ್ಲಾಘನೀಯ.








