ಬೆಂಗಳೂರು : ಹೊರಗುತ್ತಿಗೆ ನೌಕರರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ನಿಗದಿತ ಸಮಯಕ್ಕೆ ವೇತನ ನೀಡುವುದು ಕಡ್ಡಾಯಗೊಳಿಸಲಾಗಿದೆ.
ಹೌದು, ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು/ಕಾರ್ಮಿಕರ ವೇತನ ದೃಢೀಕರಣವನ್ನು ಆಯಾ ಇಲಾಖೆ/ಸಂಸ್ಥೆಗಳ ಮೂಲ ಮಾಲೀಕರು ಹಾಗೂ ಗುತ್ತಿಗೆದಾರರು ಮಾಡಬೇಕಾಗಿರುತ್ತದೆ.
ಕಾರ್ಮಿಕ ಇಲಾಖೆಗೆ, ಇಲಾಖೆಯ ಅನುಷ್ಠಾನಗೊಳಿಸುತ್ತಿರುವ ಕನಿಷ್ಠ ವೇತನ ಕಾಯ್ದೆ, 1948, ವೇತನ ಪಾವತಿ ಕಾಯ್ದೆ, 1936, ಗುತ್ತಿಗೆ ಕಾರ್ಮಿಕ ಕಾಯ್ದೆ, 1970, ಉಪಧನ ಪಾವತಿ ಕಾಯ್ದೆ, 1972, ಹೆರಿಗೆ ಭತ್ಯೆ ಕಾಯ್ದೆ 1961 ಹಾಗೂ ಅನ್ವಯಿಸುವ ಇತರೆ ಕಾರ್ಮಿಕ ಕಾಯ್ದೆಗಳನ್ವಯ ನಿರ್ದಿಷ್ಟ ದೂರುಗಳು ಬಂದಲ್ಲಿ ಸರ್ಕಾರದಿಂದ ಸದರಿ ಕಾಯ್ದೆಗಳಡಿ ಅಧಿಸೂಚಿಸಲ್ಪಟ್ಟ ಕಾರ್ಯವ್ಯಾಪ್ತಿಯ ನಿರೀಕ್ಷಕರು/ಅಧಿಕಾರಿಗಳು ತಪಾಸಣೆ ನಡೆಸುವ ಮೂಲಕ/ಕಾಲಕಾಲಕ್ಕೆ ತಪಾಸಣೆ ನಡೆಸುವ ಸಂದರ್ಭದಲ್ಲಿ ಕಾರ್ಮಿಕರ ಹೇಳಿಕೆ ಹಾಗೂ ವೇತನ ಪಾವತಿ ಮಾಡಿದ ದಾಖಲೆಗಳನ್ನು ಪರಿಶೀಲಿಸಿ ವೇತನ ಪಾವತಿಯಾದ ಬಗ್ಗೆ ದೃಢೀಕರಿಸಿಕೊಳ್ಳಲಾಗುತ್ತಿದೆ. ನಿಗದಿತ ವೇತನಕ್ಕಿಂತ ಕಡಿಮೆ ವೇತನ ನೀಡುವುದು ಹಾಗೂ ನಿಗದಿತ ಸಮಯಕ್ಕೆ ವೇತನ ನೀಡದಿದ್ದ ಪಕ್ಷದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ.









