ಬೆಂಗಳೂರು: ರಾಜ್ಯದಲ್ಲಿ ಹೊಸ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ಪಡಿತರ ಚೀಟಿ ಪಡೆಯಲು ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯದ ಮಿತಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಆಡಳಿತ ಸುಧಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ. ಸದ್ಯ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು ಈಗಿರುವ ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸುವಂತೆ ಆಹಾರ ಇಲಾಖೆಗೆ ಆಯೋಗವು ಸಲಹೆ ನೀಡಿದೆ.
ರಾಜ್ಯಾದ್ಯಂತ ಹೊಸ ಬಿಪಿಎಲ್ ಕಾರ್ಡ್ಗಾಗಿ ಸಾರ್ವಜನಿಕರಿಂದ ಭಾರಿ ಬೇಡಿಕೆ ಕೇಳಿಬಂದಿದೆ. ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿ 3-4 ವರ್ಷಗಳು ಕಳೆದಿದ್ದರೂ ಇನ್ನೂ ವಿಲೇವಾರಿಯಾಗಿಲ್ಲ. ಸದ್ಯ ರಾಜ್ಯಾದ್ಯಂತ 3,27,309 ಹೊಸ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಇವುಗಳನ್ನು ಶೀಘ್ರವಾಗಿ ಪರಿಶೀಲಿಸಿ ಹೊಸ ಕಾರ್ಡ್ ವಿತರಿಸಬೇಕೆಂದು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.
ಮಾನದಂಡಗಳ ಪರಿಷ್ಕರಣೆಗೆ ಕಾರಣವೇನು?
ಸರ್ಕಾರವು ಬಿಪಿಎಲ್ ಕಾರ್ಡ್ ಪಡೆಯಲು 2017ರಲ್ಲಿ ಕೆಲವು ಕಠಿಣ ಮಾನದಂಡಗಳನ್ನು ರೂಪಿಸಿತ್ತು. ಆದರೆ, ಈ ಮಾನದಂಡಗಳು ಹಾಗೂ ನೀತಿ ಆಯೋಗದ ಅಂಕಿ-ಅಂಶಗಳು ರಾಜ್ಯದ ಜನಸಂಖ್ಯೆಗೆ ಹೊಂದಿಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿಯಮಗಳ ಪರಿಷ್ಕರಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಗ್ರಹ ಕೇಳಿಬಂದಿತ್ತು. ಸದ್ಯ ಆಡಳಿತ ಸುಧಾರಣಾ ಆಯೋಗದ ಸಲಹೆಯ ಮೇರೆಗೆ, ಆಹಾರ ಇಲಾಖೆಯು ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ.
ಇನ್ನೊಂದೆಡೆ, ಈ ಹಿಂದೆ ನಿಗದಿಪಡಿಸಿದ್ದ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದವರ ವಿರುದ್ಧ ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಲಾಖೆಯ ಮಾಹಿತಿಯ ಪ್ರಕಾರ, ಇದುವರೆಗೆ ರಾಜ್ಯದಲ್ಲಿ ನಿಯಮ ಬಾಹಿರವಾಗಿ ಹೊಂದಿದ್ದ 4,56,675 ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದೆ.
ಬಿಪಿಎಲ್ ಕಾರ್ಡ್ ಯಾರೆಲ್ಲಾ ಅನರ್ಹರು? (ಹಳೆಯ ನಿಯಮಗಳು)
ರಾಜ್ಯ ಸರ್ಕಾರದ ಸದ್ಯದ ನಿಯಮಗಳ ಪ್ರಕಾರ ಕೆಳಗಿನ ವರ್ಗದವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾಗಿರುವುದಿಲ್ಲ:
ಆದಾಯ ತೆರಿಗೆ ಪಾವತಿಸುವ ಕುಟುಂಬಗಳು.
ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಉದ್ಯಮ, ಮಂಡಳಿ, ನಿಗಮಗಳ ಕಾಯಂ ನೌಕರರು.
ವೈದ್ಯರು, ಆಸ್ಪತ್ರೆಗಳ ನೌಕರರು, ವಕೀಲರು, ಲೆಕ್ಕ ಪರಿಶೋಧಕರು (CA).
ಐದು ಎಕರೆಗಿಂತ ಹೆಚ್ಚು ಒಣ ಭೂಮಿ ಹೊಂದಿರುವವರು.
ಬಹುರಾಷ್ಟ್ರೀಯ ಕಂಪನಿಗಳಲ್ಲಿ (MNC) ಕಾರ್ಯನಿರ್ವಹಿಸುತ್ತಿರುವ ನೌಕರರು.
ವಾರ್ಷಿಕವಾಗಿ ₹1.20 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವ ಕುಟುಂಬಗಳು.
ಆಟೋರಿಕ್ಷಾ, ಕ್ಯಾಬ್ ಮತ್ತು ಟ್ರ್ಯಾಕ್ಟರ್ಗಳನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು.
ಅನುದಾನಿತ/ಅನುದಾನರಹಿತ ಶಾಲಾ-ಕಾಲೇಜು ನೌಕರರು, ನೋಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಸ್ ಮತ್ತು ಕಮಿಷನ್ ಏಜೆಂಟ್ಗಳು, ಬೀಜ ಮತ್ತು ಗೊಬ್ಬರ ಡೀಲರ್ಗಳು.








