ಬೆಂಗಳೂರು : ರಾಜ್ಯದ ರೈತರಿಗೆ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಪೋಡಿ ದುರಸ್ತಿಯನ್ನು ಆನ್ಲೈನ್ ಮೂಲಕ ಮಾಡಿಕೊಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ತಿಂಗಳ 5 ಸಾವಿರ ಪೋಡಿ ದುರಸ್ತಿ ಮಾಡಿಕೊಡುವ ಗುರಿ ನಿಗದಿ ಮಾಡಲಾಗಿದ್ದು, ಆಂದೋಲನ ರೂಪದಲ್ಲಿ ಕೈಗೊಳ್ಳಲಾಗಿದೆ. ಸರಳೀಕೃತ ರೂಪದಲ್ಲಿ ಪೋಡೊ ದುರಸ್ತಿ ಮಾಡಿಕೊಡಲಿದ್ದು, ಇದರಿಂದ ರೈತರು ಕಚೇರಿಗಳಿಗೆ ವಿನಾಕಾರಣ ಅಲೆಯುವುದು ತಪ್ಪುತ್ತದೆ. ನಾವೇ ಮನೆಗಳಿಗೆ ಹೋಗಿ 1-5 ದಾಖಲೆಗಳನ್ನು ಸಿದ್ಧಪಡಿಸುತ್ತೇವೆ. ಇವುಗಳ ಪೈಕಿ 30,476 ಪ್ರಕರಣಗಳಲ್ಲಿ ಸರ್ವೆ ಇಲಾಖೆಯಿಂದ ಭೂಮಾಪನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಕಚೇರಿಗಳಲ್ಲಿರುವ ಎ ಮತ್ತು ಬಿ ದರ್ಜೆಯ ಕಡತಗಳನ್ನು ಭೂ ಸುರಕ್ಷಾ ಯೋಜನೆ ಅಡಿ ಗಣಕೀಕರಣ ಮಾಡಿ ಇಂಡೆಕ್ಸ್ ಕ್ಯಾಟಲಾಗ್ ಮಾಡಿ ಸ್ಕ್ಯಾನ್ ಮಾಡಲಾಗುತ್ತಿದೆ. ಇದುವರೆಗೆ 18.28 ಕೋಟಿ ಪುಟಗಳಷ್ಟು ಸ್ಕ್ಯಾನ್ ಮಾಡಲಾಗಿದ್ದು, ಇನ್ನು ಮುಂದೆ ಆನ್ಲೈನ್ ನಲ್ಲಿ ಅರ್ಜಿ ಹಾಕಿ ಪ್ರಮಾಣೀಕೃತ ದಾಖಲೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರ ನೀಡುವ ಮೂಲಕ ಮುಂದಿನ ದಿನಗಳಲ್ಲಿ ನಡೆಯಬಹುದಾದ ಅಕ್ರಮಗಳಿಗೂ ತಡೆಯೊಡ್ಡಿ ಅವರಿಗೆ ಶಾಶ್ವತ ನೆಮ್ಮದಿ ನೀಡಲಾಗುವುದು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಈ ಬಗ್ಗೆ ಮಾತನಾಡಿ, “ಮೊದಲೆಲ್ಲಾ ಹಕ್ಕುಪತ್ರಗಳನ್ನು ಕಾಗದಗಳಲ್ಲಿ ನೀಡಲಾಗುತ್ತಿತ್ತು. ಕೆಲವೊಮ್ಮೆ ಹಕ್ಕುಪತ್ರಗಳಿಗೆ ಮೂಲಪತ್ರ ಇಲ್ಲದೆ ಬೆಲೆ ಇಲ್ಲದಂತಾಗಿದೆ. ಕಾಗದ ಹಕ್ಕುಪತ್ರಗಳನ್ನು ತಿದ್ದುವ ಮೂಲಕ ವ್ಯಾಜ್ಯಗಳು ಉಂಟಾಗಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಈ ಬಾರಿ ಡಿಜಿಟಲ್ ಹಕ್ಕುಪತ್ರ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಮೂಲ ದಾಖಲೆ ಕಳೆದುಹೋಗುವ ಅಥವಾ ದಾಖಲೆಗಳನ್ನು ತಿದ್ದುವ ಪ್ರಶ್ನೆಯೇ ಇಲ್ಲ. ಇದಲ್ಲದೆ, ಸರ್ಕಾರದಿಂದ ಕ್ರಯ ಪತ್ರದ ಮೂಲಕ ನೋಂದಣಿ ಮಾಡಿಸಿ ಸ್ಥಳೀಯ ಸಂಸ್ಥೆಯಿಂದ ಖಾತೆಯೂ ಮಾಡಿಕೊಡಲಾಗುವುದು. ಹೀಗಾಗಿ ಫಲಾನುಭವಿಗಳು ಮತ್ತೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ಸಾಧ್ಯತೆಯೇ ಇಲ್ಲ” ಎಂದರು.