ಶಿವಮೊಗ್ಗ : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 18 ಸಾವಿರ ಶಿಕ್ಷಕರ ನೇಮಕಾತಿ ಶೀಘ್ರದಲ್ಲೇ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕೆ 5600, ಬೇರೆ ಕಡೆ 5 ಸಾವಿರ ಒಟ್ಟಾರೆಯಾಗಿ 18 ಸಾವಿರ ಶಿಕ್ಷಕರ ನೇಮಕಾತಿ ಶೀಘ್ರದಲ್ಲೇ ಆಗಲಿದೆ. ಶಿಕ್ಷಣ ಇಲಾಖೆಗೆ ಹೆಚ್ಚಿನ ಒತ್ತು ನೀಡಿದ್ದು ಈ ಬಾರಿಯ ಬಜೆಟ್‌ನಲ್ಲಿ 45 ಸಾವಿರ ಕೋಟಿ ಮೀಸಲಿಡಲಾಗಿದೆ. ಕಳೆದ ಬಾರಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿತ್ತು. ಈ ಬಾರಿ ಕಲಿಕೆಗೆ ಒತ್ತು ನೀಡಲಾಗಿದೆ. ಮಕ್ಕಳಿಗೆ ಶಾಲಾ ಹಂತದಲ್ಲಿ ಕೌಶಲ್ಯಗಳ ಕಲಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ‘ಸ್ಕಿಲ್ ಯೆಟ್ ಸ್ಕೂಲ್’ ಹಾಗೂ ‘ಎಐ ಆಧಾರಿತ ಕಲಿಕೆ’ಗೆ ಒತ್ತು ನೀಡಲು ಈ ಬಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ಮುಂದೆ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ ಇರುವುದಿಲ್ಲ. ಆದರೆ ಎಲ್ಲ ಶಾಲೆಗಳಿಗೆ ಟಾರ್ಗೆಟ್ ಕೊಟ್ಟಿದ್ದೇವೆ. ಗಣಿತ-ಗಣಕ, ಇಂಗ್ಲಿಷ್ ಕನ್ನಡ ಟೀಚರ್‌ಲೆಸ್ ಶಿಕ್ಷಣ ಸ್ಕಿಲ್ ಯೆಟ್ ಸ್ಕೂಲ್, ಭಾಷಾ ಪರಿಣಿತಿ, ಓದು ಕರ್ನಾಟಕ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಓದುವ ಪರಿಜ್ಞಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.