ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2025- 26 ನೇ ಸಾಲಿನಿಂದ 4134 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಆದೇಶಿಸಿದೆ.
ಹೌದು, ರಾಜ್ಯದ 4134 ಶಾಲೆಗಳಲ್ಲಿ ಇತರೆ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮವನ್ನು ಹೊಸದಾಗಿ ಆರಂಭಿಸಲು ಆದೇಶಿಸಿದ್ದು, ಈ ಮೂಲಕ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಶಿಕ್ಷಣ ಸಿಗಲಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಪ್ರಾಥಮಿಕ ಶಾಲೆ, ಪಿಎಂ- ಶ್ರೀ ಶಾಲೆಗಳನ್ನು ಆಂಗ್ಲ ಮಾಧ್ಯಮಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಪ್ರತಿ ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಹೊಂದಿರುವ ಶಾಲೆಗಳ ಪೈಕಿ ಅವರೋಹಣ ಕ್ರಮದಲ್ಲಿ ಮೊದಲ 15 ಶಾಲೆಗಳನ್ನು ಪರಿಗಣಿಸಲಾಗಿದೆ. ಒಂದು ವೇಳೆ ಈ ರೀತಿ 15 ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ತಾಲೂಕಿನ ಎಲ್ಲಾ ಶಾಲೆಗಳನ್ನು ಪರಿಗಣಿಸಲಾಗಿದೆ.
ಇಂಗ್ಲಿಷ್ ಮಾಧ್ಯಮ ಅರಸಿ ಮಕ್ಕಳು ಖಾಸಗಿ ಶಾಲೆಗೆ ಹೋಗುವುದನ್ನು ತಡೆಯಲು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಜಾರಿಗೆ ತಂದ ಮೇಲೆ ದಾಖಲೆ ಹೆಚ್ಚಾಗಿರುವುದನ್ನು ಮನಗಂಡು, ಗ್ರಾಮೀಣ ಪ್ರದೇಶದಲ್ಲಿಯೂ ಇಂಗ್ಲಿಷ್ ಮೀಡಿಯಂ ಶಾಲೆ ಆಕರ್ಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 4134 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಕ್ರಮ ಕೈಗೊಂಡಿದೆ.
2025ರ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ 4,000 ಶಾಲೆಗಳಲ್ಲಿ ದ್ವಿಭಾಷಾ ವಿಭಾಗ ಆರಂಭಿಸುವುದಾಗಿ ಘೋಷಿಸಿದ್ದರು. ಹೀಗಾಗಿ ರಾಜ್ಯದ 4134 ಶಾಲೆಗಳಲ್ಲಿ ಲಭ್ಯವಿರುವ ಮೂಲ ಸೌಕರ್ಯ ಪರಿಗಣಿಸಿ ಆಂಗ್ಲ ಮಾಧ್ಯಮ ಆರಂಭಿಸಲು ಆದೇಶಿಸಲಾಗಿದೆ.