ಬೆಂಗಳೂರು : ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಒಟ್ಟು 5000 ಶಾಲೆಗಳಿಗೆ ಎಲ್‌ಕೆಜಿ, ಯುಕೆಜಿ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಸದ್ಯ 2619 ಸರ್ಕಾರಿ ಶಾಲೆಗಳಲ್ಲಿರುವ ಎಲ್ ಕೆಜಿ, ಯುಕೆಜಿ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 90,195 ಮಕ್ಕಳು ಕಲಿಯುತ್ತಿದ್ದಾರೆ. ಇದನ್ನು 70 ಕೋಟಿ ರು. ವೆಚ್ಚದಲ್ಲಿ ಒಟ್ಟಾರೆ 5000 ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
`ಗಣಿತ ಗಣಕ ‘ಕಾರ್ಯಕ್ರಮ ದಡಿ 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಫೋನ್ ಮೂಲಕ ಬೋಧನೆಗೆ ಬುನಾದಿ ಗಣಿತ ಕೌಶಲ್ಯ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಣೆ. ‘ಓದು ಕರ್ನಾಟಕ’ ಯೋಜನೆ ಯಡಿ 4 ಮತ್ತು 5ನೇ ಕ್ಲಾಸ್ ಮಕ್ಕಳಿಗೆ ಬುನಾದಿ ಸಾಕ್ಷರತೆ, ಕೌಶಲ್ಯ ಅಭಿವೃದ್ಧಿ.
ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪ್ರಸ್ತುತ 53 ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿರುವ ಮೊಟ್ಟೆ/ಬಾಳೆಹಣ್ಣನ್ನು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ವಾರದಲ್ಲಿ ಆರು ದಿನಕ್ಕೆ ವಿಸ್ತರಿಸಲಾಗಿದೆ. ಈ ಯೋಜನೆಯನ್ನು 2025-26ನೇ ಸಾಲಿನಲ್ಲಿಯೂ ಮುಂದುವರೆಸಲಾಗುವುದು.
ಶಾಲಾ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಪ್ರಸ್ತುತ ವಾರದಲ್ಲಿ ಮೂರು ದಿನ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ವಾರದ ಐದು ದಿನಗಳಿಗೆ ವಿಸ್ತರಿಸಲಾಗುವುದು. ಒಟ್ಟಾರೆ 100 ಕೋಟಿ ರೂ. ವೆಚ್ಚದ ಈ ಯೋಜನೆಯ ಶೇ.25 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗುವುದು.
ರಾಜ್ಯದ ಅರ್ಹ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು.