ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ಸುದ್ದಿ ನೀಡಿದ್ದಾರೆ. ಮುಂದಿನ 10 ದಿನಗಳ ಒಳಗಾಗಿ ಎರಡು ತಿಂಗಳ ಬಾಕಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬಾಗಲೂರು ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಾಕಿ ಇರುವ ಹಣವನ್ನು ಹಂತಹಂತವಾಗಿ ಬಿಡುಗಡೆ ಮಾಡಲು ಇಲಾಖೆ ಸಜ್ಜಾಗಿದ್ದು, ಸಚಿವರು ಈ ಕೆಳಗಿನಂತೆ ಮಾಹಿತಿ ನೀಡಿದ್ದಾರೆ.
ಮಾರ್ಚ್ ತಿಂಗಳ ಹಣ ಮುಂದಿನ 4 ರಿಂದ 5 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ಜಮೆಯಾಗಲಿದೆ.ಏಪ್ರಿಲ್ ತಿಂಗಳ ಹಣ ಮಾರ್ಚ್ ತಿಂಗಳ ಹಣ ಪಾವತಿಯಾದ ಬೆನ್ನಲ್ಲೇ, ಅಂದರೆ ಇಂದಿನಿಂದ 8 ರಿಂದ 10 ದಿನಗಳ ಒಳಗೆ ಏಪ್ರಿಲ್ ತಿಂಗಳ ಮೊತ್ತವೂ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಜೀವನದ ಬಗ್ಗೆಯೂ ಮಾತನಾಡಿದ ಸಚಿವರು, “ನನಗೆ ಕೆಲಸ ಮಾಡುವುದು ಎಂದರೆ ಒಂದು ರೀತಿಯ ಹುಚ್ಚು. 2013ರ ಚುನಾವಣೆಯಲ್ಲಿ ಸೋತಾಗಲೂ ನಾನು ಧೃತಿಗೆಡದೆ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ. ಬೇರೆಯವರಂತೆ ನಾಟಕ ಮಾಡುವುದು ನನಗೆ ಗೊತ್ತಿಲ್ಲ. ಸಮಾಜಕ್ಕೆ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ,” ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು.








