ಬೆಳಗಾವಿ: ರಾಜ್ಯ ಸರ್ಕಾರವು ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3600 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಸಿಕ್ಕಿದ್ದು, ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿ, ಒಳ ಮೀಸಲಾತಿ ಪ್ರಕ್ರಿಯೇ ಪೂರ್ವದಲ್ಲೇ ಅಧಿಸೂಚನೆ ಆಗಿದ್ದರಿಂದ ಈಗಾಗಲೇ 947 ಪಿಎಸ್ಐ ಗಳ ಭರ್ತಿ ಪ್ರಕ್ರಿಯೆ ಪೂರ್ಣಗೊಂಡು ಅಭ್ಯರ್ಥಿಗಳು ತರಬೇತಿಯಲ್ಲಿದ್ದಾರೆ. ಒಳ ಮೀಸಲು ಕಲ್ಪಿಸುವ ಪ್ರಕ್ರಿಯೆ ಪೂರ್ಣವಾಗಿದ್ದರಿಂದ ಈಗ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ 167 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಇನ್ನೂ ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸುವಾಗ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಂದರ್ಭ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿದ ಸಂದರ್ಭ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ, ವಾರಸುದಾರರು ಯಾರೂ ಇಲ್ಲದೇ ಇರುವ ಪ್ರಕರಣಗಳಲ್ಲಿ, ದ್ವೇಷಭಾಷಣ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವ ಸಂದರ್ಭಗಳಲ್ಲಿ, ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕರು ದೂರು ನೀಡಲು ಬಾರದೇ ಇದ್ದ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕರ ಪ್ರಾಣ ಮತ್ತು ಮಾನ ಕಾಪಾಡುವ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಲಾಗುತ್ತಿದೆ. ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿಯಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತಹ ಸಂಜ್ಞೆಯ ಅಪರಾಧ, ಕೃತ್ಯದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದರು.
ಕಳೆದ ಮೂರು ವರ್ಷದಿಂದ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಒಟ್ಟು 12 ಮಂದಿಯ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ 3,600 ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಅಧಿಸೂಚನೆ @DrParameshwara , ಗೃಹ ಸಚಿವರು pic.twitter.com/uUCaKzVEtM
— DIPR Karnataka (@KarnatakaVarthe) December 18, 2025








