ಬೆಂಗಳೂರು : ಬಿಪಿಎಲ್ ಸೇರಿ ರಾಜ್ಯದ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಮೇ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜತೆಗೆ ರಾಗಿ ಮತ್ತು ಜೋಳವನ್ನು ವಿತರಿಸಲು ನಿರ್ಧರಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಪ್ರತಿ ವ್ಯಕ್ತಿಗೆ ರಾಜ್ಯದಿಂದ 5 ಕೆಜಿ, ಕೇಂದ್ರದಿಂದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಈ ಪೈಕಿ ಪಡಿತರ ಚೀಟಿದಾರರಿಗೆ ಎರಡು ಅಥವಾ ಮೂರು ಕೆಜಿ ರಾಗಿ ಅಥವಾ ಜೋಳ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ ಎನ್ನಲಾಗಿದ್ದು, ಫಲಾನುಭವಿಗಳಿಗೆ ನೀಡುತ್ತಿರುವ ಒಟ್ಟು ಪ್ರಮಾಣದಲ್ಲಿ ಪದಾರ್ಥಗಳನ್ನು ಬದಲಾವಣೆ ಮಾಡಲಾಗುತ್ತದೆ. ಕೆಲವು ಭಾಗದಲ್ಲಿ ರಾಗಿ ಮತ್ತೆ ಕೆಲವು ಕಡೆ ಜೋಳ ನೀಡಲಾಗುವುದು ಎಂದು ಹೇಳಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಜನರಿಗೆ ಉಚಿತವಾಗಿ ತಲಾ 10 ಕೆಜಿ ಅಕ್ಕಿ ವಿತರಿಸುತ್ತಿದ್ದು, ಇದರೊಂದಿಗೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 3 ಕೆಜಿ ರಾಗಿ ಹಾಗೂ 2 ಕೆಜಿ ಅಕ್ಕಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 3 ಕೆಜಿ ಜೋಳ ಮತ್ತು 2 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ.