ಬೆಂಗಳೂರು : ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಅನುಮೋದನೆ ನೀಡುವ ಕುರಿತು ಹೊರಡಿಸಿರುವ ಆದೇಶಗಳಂತೆ ಕ್ರಮವಹಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಉಲ್ಲೇಖ(1) ರ ಆದೇಶದಲ್ಲಿ ವಾಟರ್ ಅಪರೇಟರ್, ಅಟೆಂಡರ್ ಹಾಗೂ ಸ್ವಚ್ಛತಾಗಾರರಿಗೆ ದಿನಾಂಕ:31.10.2017 ಕ್ಕಿಂತ ಹಿಂದೆ ನೇಮಕಗೊಂಡು, ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆಗಾಗಿ ಬಾಕಿ ಇರುವ ಸಿಬ್ಬಂದಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊರತುಪಡಿಸಿ (ಕೈಬಿಟ್ಟು) ಸಭಾ ನಡವಳಿ ವೇತನ ಪಾವತಿ ಹಾಜರಾತಿ ಆಧಾರದ ಮೇಲೆ ಒಂದು ಬಾರಿಗೆ ಜಿಲ್ಲಾ ಪಂಚಾಯತಿಯಿಂದ ಘಟನೋತ್ತರವಾಗಿ ಅನುಮೋದನೆ ನೀಡಲು ಆದೇಶಿಸಲಾಗಿರುತ್ತದೆ. ಉಲ್ಲೇಖ(2)ರಲ್ಲಿ ದಿನಾಂಕ:31.10.2017 ಕ್ಕಿಂತ ಹಿಂದೆ ನೇಮಕಗೊಂಡು, ಎಲ್ಲಾ ದಾಖಲೆಗಳು ಸರಿಯಾಗಿದ್ದು, ಜಿಲ್ಲಾ ಪಂಚಾಯತಿಯಿಂದ ಅನುಮೋದನೆಗೆ ಬಾಕಿ ಇರುವ ಸಿಬ್ಬಂದಿಗಳಿಗೆ ಅನುಮೋದನೆ ನೀಡುವ ಕುರಿತು ಆದೇಶಿಸಲಾಗಿರುತ್ತದೆ. ಉಲ್ಲೇಖ(3) ರಲ್ಲಿ ಮೇಲ್ಕಂಡ ಆದೇಶಗಳನ್ವಯ ವಹಿಸಿರುವ ಕ್ರಮದ ಕುರಿತು ಮಾಹಿತಿಯನ್ನು ನೀಡಲು ಎಲ್ಲಾ ಜಿಲ್ಲಾ ಪಂಚಾಯತಿಗಳಿಗೆ ಕೋರಲಾಗಿದ್ದು, ಸ್ವೀಕೃತ ಮಾಹಿತಿಯನ್ನು ಪರಿಶೀಲಿಸಲಾಗಿ ಜಿಲ್ಲೆಗಳ ಹಂತದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಅನುಮೋದನೆ ಬಾಕಿ ಉಳಿದಿರುವುದು ಕಂಡು ಬಂದ ಕಾರಣ ಉಲ್ಲೇಖ(4) ರಂತೆ ಅರೆ ಸರ್ಕಾರಿ ಪತ್ರದಲ್ಲಿಯೂ ಸಹ ಈ ವಿಷಯವನ್ನು ಆದ್ಯತೆ ಮೇಲೆ ಪರಿಗಣಿಸಿ ಅನುಮೋದನೆ ನೀಡಲು ತಿಳಿಸಲಾಗಿರುತ್ತದೆ.
ಸದರಿ ವಿಷಯದ ಕುರಿತು, ರಾಜ್ಯ ಮಟ್ಟದಲ್ಲಿ ನಡೆದ ಹಲವಾರು ಸಭೆಗಳಲ್ಲಿ ಸಹ ಚರ್ಚೆಯಾಗಿರುತ್ತದೆ. ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಅನುಮೋದನೆ ನೀಡಲು ಸರ್ಕಾರದಿಂದ ಆದೇಶ ನೀಡಿದ್ದರೂ ಈವರೆಗೆ ಸಿಬ್ಬಂದಿಗಳಿಗೆ ಅನುಮೋದನೆ ನೀಡಲು ವಿಳಂಭವಾಗಿದ್ದು ಸದರಿ ವಿಷಯವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಮತ್ತಷ್ಟು ವಿಳಂಬಕ್ಕೆ ಆಸ್ಪದ ನೀಡದೇ ವೈಯಕ್ತಿಕ ಗಮನ ಹರಿಸಿ ಗ್ರಾಮ ಪಂಚಾಯತಿಯ ಸಿಬ್ಬಂದಿಗಳಿಗೆ ಉಲ್ಲೇಖಿತ ಆದೇಶಗಳಂತೆ ಅನುಮೋದನೆಯನ್ನು ನೀಡಲು ಕ್ರಮವಹಿಸುವಂತೆ ತಿಳಿಸಿದೆ.