ಬೆಂಗಳೂರು : ಬಗರ್ ಹುಕುಂ ಸಾಗುವಳಿ ರೈತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕಾಲಮಿತಿಯೊಳಗೆ ಖಾತೆ ಮಾಡಿಕೊಡಲು ಕ್ರಮ ವಹಿಸುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಡಾ.ಎಸ್.ಯತೀಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್‌ಹುಕುಂ ಸಾಗುವಳಿ ಚೀಟಿ ನೈಜವಾಗಿ ಮಂಜೂರಾಗಿ ಖಾತೆಯಾಗದೆ ಅನ್ಯಾಯವಾಗಿದ್ದರೆ ಕಾಲಮಿತಿಯೊಳಗೆ ಖಾತೆ ಮಾಡಿಕೊಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಸಾಗುವಳಿ ಚೀಟಿ ನೀಡಿ ವರ್ಷಗಳು ಕಳೆದರೂ ಖಾತೆ ಮಾಡದೆ ವಿಳಂಬ ಮಾಡುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ. ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನಡವಳಿ, ಸಾಗುವಳಿ ಚೀಟಿ ವಿತರಣೆ, ಕಿಮ್ಮತ್ತು ಪಾವತಿ ಸೇರಿದಂತೆ ಮೂಲ ಮಂಜೂರಿದಾರರ ಹೆಸರು, ಜಮೀನಿನ ವರ್ಗದ ಬಗ್ಗೆ ಅರಣ್ಯ ಜಮೀನಿನ ಕುರಿತು ಪರಿಶೀಲಿಸಿ ಖಾತೆ ಮಾಡಿಕೊಡಲಾಗುವುದು ಎಂದು ಎಂದು ಹೇಳಿದ್ದಾರೆ.