ಬೆಂಗಳೂರು : ವೇತನ ಹೆಚ್ಚಳ, ಹಳೆಯ ಪಿಂಚಣಿ ಯೋಜನೆ ಜಾರಿ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದು, 7ನೇ ವೇತನ ಆಯೋಗ ಶಿಫಾರಸು ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಡಾ.ಜಿ. ಪರಮೇಶ್ವರ್ ಅವರು, ಸರ್ಕಾರದ ಮುಂದಿರುವ 7ನೇ ವೇತನ ಆಯೋಗ ಶಿಫಾರಸ್ಸನ್ನು ಜಾರಿಗೆ ತರಲು 18,000 ಕೋಟಿ ರೂ. ಬೇಕು. ಇದರ ಜತೆಗೆ ಒಪಿಎಸ್ ಜಾರಿಗೂ ನೂರಾರು ಕೋಟಿ ರು. ಬೇಕು. ಹಾಗಾಗಿ ಒಂದೇ ದಿನದಲ್ಲಿ ಎಲ್ಲವನ್ನೂ ಜಾರಿಗೆ ತರಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರವೇ 6ನೇ ವೇತನ ಆಯೋಗ ಜಾರಿಗೆ ತಂದಿದೆ. ನಾವು ಯಾರಿಗೂ ಮೋಸ ಮಾಡಲ್ಲ, ತಾಳ್ಮೆಯಿಂದ ಇರಿ ಎಂದು ಭರವಸೆ ನೀಡಿದ್ದಾರೆ.
ಅನುದಾನಿತ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಸಂಬಂಧಿಸಿದಂತೆ ಸರ್ಕಾರ ಶೀಘ್ರವೇ ಸೂಕ್ತ ನಿರ್ಧಾರಕ್ಕೆ ಬರಲಿದೆ. ನಾನು ಕೂಡ ಶಿಕ್ಷಣ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.