ಬೆಂಗಳೂರು: ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಹಠಾತ್ ಹೃದಯಘಾತ ಆಗದಂತೆ ಜೀವರಕ್ಷಕ ಚುಚ್ಚುಮದ್ದುಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯಾಘಾತ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟೆಪ್ಲೇಸ್ ಅನ್ನು ಎಲ್ಲಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಇದೇ ವೇಳೆ ಮುಂದಿನ ವರ್ಷ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಈ ಯೋಜನೆ ವಿಸ್ತರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಹೃದಯಜ್ಯೋತಿ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ 71 ತಾಲೂಕು ಆಸ್ಪತ್ರೆ ಮತ್ತು 15 ಜಿಲ್ಲಾಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ, ಜಿಲ್ಲಾಸ್ಪತ್ರೆಗಳ 65 ಹೃದಯ ತಜ್ಞರು ಆನ್ಲೈನ್ ಸಂಪರ್ಕದಲ್ಲಿದ್ದು ರೋಗಿಯ ಆರೋಗ್ಯ ಮತ್ತು ಜೀವ ರಕ್ಷಣೆಗೆ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಜೊತೆಗೆ ಅಗತ್ಯವೆನಿಸಿದರೆ ₹30 ಸಾವಿರ ಮೊತ್ತದ ಇಂಜೆಕ್ಷನ್ ಉಚಿತವಾಗಿ ನೀಡಲಾಗುತ್ತದೆ. ಮುಂದಿನ ವರ್ಷ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಈ ಯೋಜನೆ ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ.