ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಕನಿಷ್ಠ ವೇತನ ಕಾಯ್ದೆ 1948 ರ ಕಲಂ 5(1) (ಎ) ಹಾಗೂ 5(1) (ಬಿ) ರಡಿ ಇದುವರೆಗೂ 81 ಅನುಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾದ ವೇತನ ದರಗಳನ್ನು ನಿಗದಿಪಡಿಸಿ / ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗುತ್ತಿತ್ತು. 2022-23ನೇ ಸಾಲಿನಲ್ಲಿ ವಿವಿಧ ಅನುಸೂಚಿತ ಉದ್ದಿಮೆಗಳಿಗೆ ಸಂಬಂಧಿಸಿದ ಒಟ್ಟು 34 ಅನುಸೂಚಿತ ಉದ್ದಿಮಗಳಿಗೆ ಸದರಿ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕನಿಷ್ಠ ವೇತನಕ್ಕೆ ಹೆಚ್ಚುವರಿಯಾಗಿ ಶೇ. 5 ರಿಂದ 10 ರಷ್ಟು ಏರಿಕೆ ಮಾಡಿದ ದರಗಳನ್ನು ಪರಿಷ್ಕರಿಸಿ ಅಧಿಸೂಚನೆಗಳನ್ನು ಹೊರಡಿಸಲಾಗಿರುತ್ತದೆ.
ಸದರಿ ಅಧಿಸೂಚನೆಗಳನ್ನು ಎಐಟಿಯುಸಿ ಕಾರ್ಮಿಕ ಸಂಘದವರು ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದು, ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಸಂಖ್ಯೆ: 13103/2023 ಮತ್ತು ಇತರ ಪ್ರಕರಣಗಳಲ್ಲಿ ದಿನಾಂಕ: 26.9.2023, 10.10.2023 ಮತ್ತು 12.10.2023 ರ ತೀರ್ಪುಗಳಲ್ಲಿ ಸದರಿ ಅಧಿಸೂಚನೆಗಳನ್ನು ರದ್ದುಪಡಿಸಿ, ಮೆ|| ರಕೋಸ್ ಬ್ರೆಟ್ ಅಂಡ್ ಕಂ, ಪಕರಣದಲ್ಲಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಮಾರ್ಗಸೂಚಿಗಳನ್ನನುಸರಿಸಿ ಕನಿಷ್ಠ ವೇತನ ಲೆಕ್ಕಾಚಾರ ಮಾಡಿ ಹೊಸದಾಗಿ ಅಧಿಸೂಚನೆಗಳನ್ನು ಹೊರಡಿಸುವಂತೆ ನಿರ್ದೇಶಿಸಲಾಗಿರುತ್ತದೆ.
ತದನಂತರ, ಗೌರವಾನ್ವಿತ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ತೀರ್ಪುಗಳನ್ನು ಪ್ರಶ್ನಿಸಿ, ವಿವಿಧ ಆಡಳಿತ ವರ್ಗದವರು ಮೇಲ್ಮನವಿ ಅರ್ಜಿಯನ್ನು ಮಾನ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ದಾಖಲಿಸಿದ್ದು, ಸದರಿ ಮೇಲ್ಮನವಿ ಪ್ರಕರಣದಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ದಿನಾಂಕ: 13.12.2024 ರಂದು ಹೊರಡಿಸಿರುವ ತೀರ್ಪಿನಲ್ಲಿ, ಪುಕರಣವನ್ನು ಏಕಸದಸ್ಯ ಪೀಠಕ್ಕೆ ಹಿಂದಿರುಗಿಸಿ, ಆಡಳಿತ ವರ್ಗದವರಿಗೆ ಅವಕಾಶ ನೀಡಿ, 10 ವಾರಗಳ ಕಾಲಮಿತಿಯೊಳಗೆ ನಿಯಮಾನುಸಾರ ತೀರ್ಪು ಹೊರಡಿಸುವಂತೆ ನಿರ್ದೇಶಿಸಿರುತ್ತದೆ.
ಈ ಹಂತದಲ್ಲಿ, 2022-23 ನೇ ಸಾಲಿನಲ್ಲಿ 34 ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ಹಿಂಪಡೆದು, ಮ|| ರಶ್ಮಿಕೋಸ್ ಬ್ರೆಟ್ ಅಂಡ್ ಕಂ., ಪ್ರಕರಣದ ಮಾನದಂಡಗಳನ್ವಯ ಹೊಸದಾಗಿ ಅಧಿಸೂಚನೆಗಳನ್ನು ಹೊರಡಿಸುವ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿದ್ದು, “ಕಾರ್ಮಿಕರ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ಯಾವುದೇ ರೀತಿಯ ಅಡೆತಡೆಗಳು ಈ ಹಂತದಲ್ಲಿ ಇಲ್ಲದೇ ಇರುವುದರಿಂದ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೇಲೆ ಉಲ್ಲೇಖಿಸಿದ ತೀರ್ಪಿನ ಬೆಳಕಿನ ಅಡಿಯಲ್ಲಿ ಕನಿಷ್ಠ ವೇತನವನ್ನು ಪರಿಷ್ಕರಿಸಿ ನಿಯಮಾನುಸಾರ ಮುಂದುವರೆಯಬಹುದಾಗಿದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿರುತ್ತದೆ.
ವಿವಿಧ ಅನುಸೂಚಿತ ಉದ್ದಿಮಗಳಲ್ಲಿ ವಲಯವಾರು ಹಾಗೂ ಕುಶಲವಾರು ವೇತನ ದರದಲ್ಲಿ ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಎಲ್ಲಾ ವರ್ಗದ ಕಾರ್ಮಿಕರಿಗೂ ಸಮಾನವಾದ ಕನಿಷ್ಠ ವೇತನ ದೊರಯಬೇಕೆಂಬ ಸದುದ್ದೇಶದಿಂದ ಈ ಹಿಂದೆ ಅನುಸೂಚಿತ ಉದ್ದಿಮೆವಾರು ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಹೊರಡಿಸುತ್ತಿದ್‌ದ ಕ್ರಮದ ಬದಲಾಗಿ ಏಕರೂಪ ಅಧಿಸೂಚನೆಯನ್ನು ಹೊರಡಿಸಿದ.
ಈ ಅಧಿಸೂಚನೆಯ ಅನುಸೂಚಿ-1 ರಲ್ಲಿ ಈಗಾಗಲೇ ಕಾಯ್ದೆಯ ಅನುಸೂಚಿಗೆ ಸೇರ್ಪಡೆಗೊಂಡು ಪರಿಷ್ಕರಿಸಲಾಗುತ್ತಿರುವ ಉದ್ದಿಮೆಗಳಾಗಿರುತ್ತವೆ. ಅನುಸೂಚಿ-3 ರಲ್ಲಿ ಕಾಯ್ದೆಯ ಅನುಸೂಚಿಗೆ ಹೊಸದಾಗಿ ಸೇರ್ಪಡೆಗೊಂಡು ಪ್ರಥಮ ಬಾರಿಗೆ ವೇತನ ನಿಗದಿಪಡಿಸಬಹುದಾದ ಉದ್ದಿಮಗಳಾಗಿರುತ್ತವೆ. ಅನುಸೂಚಿ-1 ಹಾಗೂ ಅನುಸೂಚಿ-3 ರಲ್ಲಿರುವ ಉದ್ದಿಮೆಗಳಲ್ಲಿನ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಈ ಕಳಕಂಡ ಅನುಸೂಚಿ-4 ರಲ್ಲಿ ನಿರ್ದಿಷ್ಟಪಡಿಸಿರುವಂತೆ ಕನಿಷ್ಠ ವೇತನವನ್ನು ಪರಿಷ್ಕರಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದ. ಅನುಸೂಚಿ-4 ರಲ್ಲಿ ನಿಗದಿಪಡಿಸಿರುವ/ಪರಿಷ್ಕರಿಸಲಾಗಿರುವ ಕನಿಷ್ಠ ವೇತನ ದರಗಳು ಹೀಗಿವೆ.
