ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಾಮಾನ್ಯ ಕೋರ್ಸ್‌ಗಳ ಜೊತೆಗೆ ಒಂದು ಕೌಶಲ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ (ಎರಡು ಸೆಮಿಸ್ಟರ್) ಪ್ರತಿ ತಿಂಗಳು ₹11 ಸಾವಿರದಿಂದ ₹17 ಸಾವಿರದವರೆಗೆ ಶಿಷ್ಯವೇತನ ಸಿಗಲಿದೆ.
ರಾಜ್ಯದ ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ಪದವಿ ಕೋರ್ಸ್‌ಗಳ ಜೊತೆಗೆ ಕೌಶಲಾಧಾರಿತ ವಿಷಯಗಳ ಅಧ್ಯಯನಕ್ಕೂ ಅವಕಾಶ ಮಾಡಿಕೊಡಲಾಗಿದ್ದು, ಇದೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕೊನೆಯ ಐದು ಮತ್ತು ಆರನೇ ಸೆಮಿಸ್ಟರ್‌ನಲ್ಲಿ ಶಿಷ್ಯ ವೇತನದ ಸೌಲಭ್ಯ ದೊರಕಲಿದೆ.
ಹತ್ತು ಮಂದಿ ನಿವೃತ್ತ ಐಎಎಸ್ ಅಧಿಕಾರಿಗಳು ಸ್ಥಾಪಿಸಿರುವ ಕ್ರಿಸ್ಪ್ ಜೊತೆ ಉನ್ನತ ಶಿಕ್ಷಣದಲ್ಲಿ ಕೌಶಲಾಧಾರಿತ ಕೋರ್ಸ್‌ಗಳನ್ನು ಪರಿಚಯಿಸುವ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ. ಮೊದಲ ವರ್ಷ 60 ಕಾಲೇಜುಗಳಲ್ಲಿ 3,600 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಮೂರು ವರ್ಷಗಳಲ್ಲಿ 239 ಕಾಲೇಜುಗಳಿಗೆ ಯೋಜನೆ ವಿಸ್ತರಿಸಲಾಗುವುದು. 2026-27ರ ವೇಳೆಗೆ 14,340 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಗುರಿ ಹೊಂದಲಾಗಿದೆ ಅಂಥ ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ.