ಬೆಂಗಳೂರು : ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಒಳ ಮೀಸಲಾತಿ ವರದಿ ಜಾರಿಯಾದ ಬೆನ್ನಲ್ಲೇ 85,000ಕ್ಕೂ ಅಧಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗಲಿದೆ.
ಹೌದು, ರಾಜ್ಯದಲ್ಲಿ ಒಳ ಮೀಸಲಾತಿ ಕಾರಣಕ್ಕೆ 2024ರ ನವೆಂಬರ್ ನಿಂದ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಗಣಪತಿ ಹಬ್ಬ ಮುಗಿಯುತಿದ್ದಂತೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಮೀಸಲಾತಿ ಅನ್ವಯವಾಗುವ ಹುದ್ದೆಗಳ ನೇರ ನೇಮಕಾತಿಗೆ ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸದಂತೆ 2024ರ ನವೆಂಬರ್ 25 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿತ್ತು. ಆಗಿನಿಂದ ನೇಮಕಾತಿ ನಡೆದಿಲ್ಲ.ಈಗ ಒಳ ಮೀಸಲಾತಿ ಜಾರಿಯಾಗಲಿರುವುದರಿಂದ ನೇಮಕಾತಿಗೆ ಮತ್ತು ಬಡ್ತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಸುಮಾರು 85,000 ಹುದ್ದೆಗಳ ನೇಮಕಾತಿ ಗಳಿಗಾಗಿ ಎಲ್ಲಾ ಇಲಾಖೆಗಳ ಬೇಡಿಕೆ ಪ್ರಕ್ರಿಯೆ ವಿವಿಧ ಹಂತದಲ್ಲಿವೆ. ಕೆಲವು ಆರ್ಥಿಕ ಇಲಾಖೆ ಕೋರುವ ಹಂತದಲ್ಲಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ರಾಜ್ಯದಲ್ಲಿ ಮಂಜೂರಾದ 7,76,414 ಹುದ್ದೆಗಳಿದ್ದು, 4,91,533 ಹುದ್ದೆಗಳು ಭರ್ತಿಯಾಗಿವೆ. 2,84,881 ಖಾಲಿ ಹುದ್ದೆಗಳಿವೆ.
ಸಾರಿಗೆ ಇಲಾಖೆಯಿಂದ ವಾಯುವ್ಯ ಕರ್ನಾಟಕ ಸಾರಿಗೆಯ 1000 ಚಾಲಕರ ಹುದ್ದೆ ಭರ್ತಿಗೆ ಪ್ರಕ್ರಿಯೆ ನಡೆದಿದ್ದು, ಒಟ್ಟಾರೆ 4500 ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆಗೆ ಅನುಮತಿ ಕೋರಲಾಗಿದೆ. ಪರಿಶಿಷ್ಟ ಮೀಸಲು ಹಂಚಿಕೆ ಸರ್ಕಾರದ ಆದೇಶ ಪ್ರಕಟವಾಗುತ್ತಿದ್ದಂತೆ ಶೇಕಡ 17ರ ಮೀಸಲಾತಿ 6:6:5ರಂತೆ ಹಂಚಿಕೆಯಾಗಲಿದೆ. ಈ ಒಳ ಮೀಸಲಾತಿ ಅನುಸಾರ ಹುದ್ದೆಗಳ ನೇಮಕಾತಿ, ಬಡ್ತಿ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.