ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್ ಪಡೆಯಲು ನಿಗದಿಪಡಿಸಲಾದ ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸಲು ಸರ್ಕಾರ ಸಕಾರಾತ್ಮಕವಾಗಿ ಚಿಂತನೆ ನಡೆಸಿದೆ. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಹಾರ ಸಚಿವರ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ವಿಷಯವನ್ನು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಪಡೆಯಲು ಇರುವ ವಾರ್ಷಿಕ ಆದಾಯದ ಮಿತಿಯನ್ನು ₹3 ಲಕ್ಷಕ್ಕೆ ಏರಿಸುವಂತೆ ಆರ್.ವಿ. ದೇಶಪಾಂಡೆ ನೇತೃತ್ವದ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ ಎಂದು ಹೇಳಿದ್ದಾರೆ.
ಕೇಂದ್ರದ ಮಾನದಂಡದ ಪ್ರಕಾರ ರಾಜ್ಯದಲ್ಲಿ 1.09 ಕೋಟಿ ಬಿಪಿಎಲ್ ಕಾರ್ಡ್ಗಳಿರಬೇಕು. ಆದರೆ ಸದ್ಯ ರಾಜ್ಯದಲ್ಲಿ ಇದಕ್ಕಿಂತ ಹೆಚ್ಚಿನ ಕಾರ್ಡ್ಗಳಿದ್ದು, ಹೆಚ್ಚುವರಿ ಕಾರ್ಡ್ಗಳಿಗೆ ಕೇಂದ್ರದಿಂದ ಪಡಿತರ ಲಭ್ಯವಾಗುತ್ತಿಲ್ಲ ಎಂದು ಸಚಿವರು ವಿವರಿಸಿದ್ದಾರೆ.








