ಬೆಂಗಳೂರು: ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಕಂದಾಯ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರದ ವಿವಿಧ ಆದೇಶಗಳಲ್ಲಿ ಕಾಲಕಾಲಕ್ಕೆ ಪಹಣಿ ತಿದ್ದುಪಡಿ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರರಿಗೆ ಪ್ರತ್ಯಾಯೋಜಿಸಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಅದರಂತೆ ದಿನಾಂಕ:30.06.2025 ಕ್ಕೆ ಸದರಿ ಪ್ರತ್ಯಾಯೋಜನೆಯ ಅವಧಿಯು ಮುಕ್ತಾಯಗೊಂಡಿರುತ್ತದೆ ಎಂದಿದ್ದಾರೆ.
ಸದರಿ ಕಂದಾಯ ಅದಾಲತ್ ಯೋಜನೆಯನ್ನು 2014ನೇ ಸಾಲಿನಿಂದ ಆರಂಭಿಸಿದ್ದು, ಜೂನ್ 2025 ರವರೆಗೂ ವಿಸ್ತರಿಸಲಾಗಿರುತ್ತದೆ. ಆದಾಗ್ಯೂ ಪಹಣಿ ತಿದ್ದುಪಡಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂಬಂಧ ಕಂದಾಯ ಅದಾಲತ್ ಅವಧಿಯನ್ನು ವಿಸ್ತರಿಸಲು ಕೋರಿ ಕೆಲವು ತಾಲ್ಲೂಕುಗಳಿಂದ ಮನವಿಗಳು ಸ್ವೀಕೃತವಾಗಿರುತ್ತವೆ ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸುವ ಕುರಿತಂತೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು 15 ದಿನಗಳಲ್ಲಿ ಸಲ್ಲಿಸಲು ತಿಳಿಸಿದ್ದಾರೆ.








