ಬೆಂಗಳೂರು: ರಾಜ್ಯದ ಗ್ರಾಮ ಆಡಳಿತಾಧಿಕಾರಿಗಳಿಗೆ ಆನ್ ಲೈನ್ ಮೂಲಕ ಕಡತ ವಿಲೇವಾರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಲ್ಯಾಪ್ ಟಾಪ್ ವಿತರಣೆಗೆ ಸಚಿವ ಸಂಪುಟ ಅನುಮೋದಿಸಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ಮತ್ತು ಇ-ಆಡಳಿತ ನೀಡುವ ಉದ್ದೇಶದಿಂದ ನಮ್ಮ ಸರ್ಕಾರದಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ದಿಶೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಮುಂದುವರೆದ ಭಾಗವಾಗಿ ಕಂದಾಯ ಇಲಾಖೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಆಡಳಿತ ಸಾಧಿಸಲು ಕೆಳಹಂತದಿಂದಲೇ ಎಲ್ಲರಿಗೂ ಆನ್ಲೈನ್ ಕಡತ ವಿಲೇವಾರಿ ಜಾರಿ ಮಾಡಲು ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ಒದಗಿಸಲು ಸಂಪುಟ ಮಂಜೂರಾತಿ ಮಾಡಿದೆ. ಈಗಾಗಲೇ 5000 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತಿದೆ. ಉಳಿದ ಗ್ರಾಮ ಆಡಳಿತಾಧಿಕಾರಿಗಳಿಗೆ ಮತ್ತು ಕಂದಾಯ ನಿರೀಕ್ಷಕರುಗಳಿಗೆ 3500 ಲ್ಯಾಪ್ಟಾಪ್ ನೀಡಲು 19.25 ಕೋಟಿ ಅನುದಾನ ಒದಗಿಸಲು ಇಂದಿನ ಸಭೆಯಲ್ಲಿ ಸಂಪುಟ ಅನುಮತಿ ನೀಡಿದೆ ಎಂದಿದ್ದಾರೆ.
ಇದರಿಂದ ಈ ವರ್ಷದಿಂದಲೇ ಕಂದಾಯ ಇಲಾಖೆಯ ಎಲ್ಲಾ ಹಂತಗಳಲ್ಲಿ ಗಣಕೀಕೃತ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ಅಧಿಕಾರಿಗಳ ಮೇಲೆ ಕೆಲಸದ ಭಾರ ಕಡಿಮೆ ಮಾಡಬಹುದು. ಅಲ್ಲದೇ ಕಡತ ವಿಲೇವಾರಿಗೆ ವೇಗ ತರಲಾಗುವುದರ ಜೊತೆಗೆ ಕಡತ ವಿಲೇಯಲ್ಲಿ ವಿಳಂಬಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಮುಂದುವರೆದು, ಈ ಕ್ರಮದಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಬರಲಿದೆ ಮತ್ತು ಕಡತ ಎತ್ತಿಡುವುದು ಹಾಗೂ ಕಳೆದು ಹೋಗುವುದಕ್ಕೆ ಅವಕಾಶವಿರುವುದಿಲ್ಲ. ಇದೊಂದು ಜನಪರವಾದ ಉತ್ತಮ ಆಡಳಿತ ನೀಡುವ ದಿಶೆಯಲ್ಲಿ ಪ್ರಮುಖ ಹೆಜ್ಜೆ, ಇದರಿಂದ ಅಧಿಕಾರಿಗಳ ಕೆಲಸದಸರಳೀಕರಣ ಕೂಡ ಆಗಲಿದೆ ಎಂದು ಹೇಳಿದ್ದಾರೆ.
BREAKING: ಅಕ್ರಮ ಆಸ್ತಿ ಪತ್ತೆ ಪ್ರಕರಣ: ಶಾಸಕ ಸತೀಶ್ ಸೈಲ್ಗೆ ಮಧ್ಯಂತರ ಜಾಮೀನು ಮಂಜೂರು