ಬೆಂಗಳೂರು : ರಾಜ್ಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ತೇರ್ಗಡೆಗೆ ನಿಗದಿಪಡಿಸಿರುವ ಶೇ.33 ರಷ್ಟು ಅಂಕ ಈ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯ ಉತ್ತೀರ್ಣತೆಯ ಕನಿಷ್ಠ ಅಂಕವನ್ನು ಶೇ.33 ಕ್ಕೆ ನಿಗದಿ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ ನಂತರವೂ ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ಲಕ್ಷಾಂತರ ಮಕ್ಕಳಿಗೆ ಕೆಲವೊಮ್ಮೆ ಎರಡು ಅಂಕಗಳೇ ನಿರ್ಣಾಯಕವಾಗಿರುತ್ತವೆ. ಒಬ್ಬ ವ್ಯಕ್ತಿ ಇಂದು ಚಾಲನಾ ಪರವಾನಗಿ ಪಡೆಯಲು ಎಸ್ ಎಸ್ ಎಲ್ ಸಿ ಅಂಕಪಟ್ಟಿ ನೀಡಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಮೂರು ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಭವಿಷ್ಯ ಹಸನಾಗುತ್ತಿದೆ. ಎಸ್ಎಸ್ಎಲ್ಸಿ ನಂತರ ಶಿಕ್ಷಣ ತೊರೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದರು.
6,000 KPS ಶಾಲೆ ತೆರೆಯಲು ಚಿಂತನೆ- ಸಚಿವ ಮಧು ಬಂಗಾರಪ್ಪ
ರಾಜ್ಯದಲ್ಲಿ 6,000 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದರಂತೆ 6 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ತೆರೆಯುವ ಚಿಂತನೆ ಇದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಮಾತನಾಡಿದ ಅವರು, “ನಾನು ಸಚಿವನಾದ ತಕ್ಷಣ ಪಠ್ಯಪುಸ್ತಕ ಪರಿಷ್ಕರಣೆಗೆ ಸಹಿ ಹಾಕಿದ್ದೇನೆ. ಮಕ್ಕಳಿಗೆ ಶಿಕ್ಷಣ ಇರಬೇಕೇ ಹೊರತು, ಪಠ್ಯಪುಸ್ತಕದಲ್ಲಿ ಯಾವುದೇ ಜಾತಿ-ಧರ್ಮಕ್ಕೆ ಸಂಬಂಧಿಸಿದ, ದಾರಿ ತಪ್ಪಿಸುವ ವಿಚಾರಗಳಿಗೆ ಅವಕಾಶ ನೀಡಬಾರದು ಎಂಬ ದೃಢ ನಿಲುವು ನಮ್ಮದಾಗಿದೆ. ಈ ಕೆಲಸ ಮಾಡುವಾಗ ಟೀಕೆ-ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಕೇವಲ 308 ಇದ್ದ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಸಂಖ್ಯೆಯನ್ನು ತಮ್ಮ ಸರ್ಕಾರ ಒಂದೇ ಬಾರಿಗೆ 900ಕ್ಕೆ ಏರಿಸಿದೆ ಎಂದು ಸಚಿವರು ಹೇಳಿದರು. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಮತ್ತು ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಗ್ರಾಮೀಣ ಭಾಗದಲ್ಲಿರುವ ಸುಮಾರು 6,000 ಗ್ರಾಮ ಪಂಚಾಯತಿಗಳಲ್ಲಿ 6,000 ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವ ಗುರಿ ಇದೆ, ಎಂದು ಸಚಿವರು ತಿಳಿಸಿದರು.
ಕೆಪಿಎಸ್ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಮತ್ತು 6ನೇ ತರಗತಿಯಿಂದ ಕೌಶಲ್ಯ ಅಭಿವೃದ್ಧಿ (ಸ್ಕಿಲ್) ತರಗತಿಗಳನ್ನು ಪ್ರಾರಂಭಿಸಲಾಗುವುದು. ಜೊತೆಗೆ, ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಮಕ್ಕಳ ದಾಖಲಾತಿಯಾದರೆ, ಅವರಿಗೆ ಬಟ್ಟೆ, ಊಟ, ಪುಸ್ತಕ, ಮತ್ತು ಉಚಿತ ಬಸ್ ಸೌಕರ್ಯ ದೊರೆಯಲಿದೆ ಎಂದು ತಿಳಿಸಿದರು. ಇದೇ ವೇಳೆ, ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಪೌಷ್ಟಿಕತೆಯನ್ನು ಒದಗಿಸಲು ನೆರವು ನೀಡುತ್ತಿರುವ ಅಜೀಂ ಪ್ರೇಮ್‌ಜಿ ಫೌಂಡೇಷನ್‌ಗೆ ಸಚಿವರು ಧನ್ಯವಾದ ಸಲ್ಲಿಸಿದರು.
ಶಿಕ್ಷಣಕ್ಕೆ ಹೆಚ್ಚು ಬಜೆಟ್ (ಸುಮಾರು 45,000 ಕೋಟಿ ರೂ.) ಖರ್ಚು ಮಾಡುತ್ತಿರುವ ಶಿಕ್ಷಣ ಇಲಾಖೆಯು, ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಶಿಕ್ಷಣಕ್ಕೆ ಒತ್ತು ನೀಡಲಿದೆ. ದೇಶದ ಆಸ್ತಿಯಾಗಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ದೇಶವು ಪ್ರಗತಿಯತ್ತ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರು ಮನವಿ ಮಾಡಿದರು.
ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದರಂತೆ 6 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ತೆರೆಯುವ ಚಿಂತನೆ ಇದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ. pic.twitter.com/q2kWAE6Tpb
— DIPR Karnataka (@KarnatakaVarthe) November 12, 2025








