ಬೀದರ್ : ಬೀದರ್ ಜಿಲ್ಲೆಯಲ್ಲಿ ಸೆಪ್ಟೆಂಬರ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಆಗಿರುವ ಬೆಳೆ ಹಾನಿಗೆ ಮುಖ್ಯಮಂತ್ರಿಗಳು ಘೋಷಿಸಿರುವ ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8500 ರೂ. ಪರಿಹಾರವೂ ಸೇರಿದಂತೆ ಒಟ್ಟಾರೆ 300 ಕೋಟಿ ರೂ. ಬೆಳೆ ಹಾನಿ ಪರಿಹಾರವನ್ನು ಅ.30ರೊಳಗೆ ಪಾವತಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು, ನಾಳೆ ಸಂಜೆಯೊಳಗೆ ಮಳೆ ಹಾನಿ ಪ್ರದೇಶದ ತಹಶೀಲ್ದಾರರು ಪರಿಹಾರದ ಪೋರ್ಟಲ್ ನಲ್ಲಿ ಹಾನಿಯ ಪ್ರಮಾಣವನ್ನು ಕಡ್ಡಾಯವಾಗಿ ದಾಖಲಿಸಿ, ಪರಿಹಾರ ನೀಡಿಕೆಗೆ ತುರ್ತು ಕ್ರಮ ವಹಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.
ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ನಿಯಮದಂತೆ 170 ಕೋಟಿ ರೂಪಾಯಿ ಪರಿಹಾರವನ್ನು ಈಗಾಗಲೇ ಪಾವತಿಸಲಾಗುತ್ತಿದೆ. ಅಕ್ಟೋಬರ್ 30ರೊಳಗೆ 300 ಕೋಟಿ ರೂ. ಪರಿಹಾರ ಮೊತ್ತ ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಅಕಾಲಿಕ ಮಳೆಯಿಂದ ಉಂಟಾಗಿರುವ ಜೀವಹಾನಿ, ಬೆಳೆಹಾನಿ, ಮನೆ ಹಾನಿ, ಜಾನುವಾರು ಹಾನಿಗೆ ದೀಪಾವಳಿಯೊಳಗೆ ಪರಿಹಾರ ನೀಡುವುದಾಗಿ ಪ್ರಕಟಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಹಗಲಿರುಳು ಶ್ರಮಿಸಿ, ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದವರ ನೆರವಿಗೆ ಧಾವಿಸಬೇಕು ಎಂದು ಆದೇಶ ನೀಡಿದರು.
ತಹಶೀಲ್ದಾರರಿಗೆ ತರಾಟೆ:
ಬಸವಕಲ್ಯಾಣದಲ್ಲಿ 47, ಭಾಲ್ಕಿ 38, ಬೀದರ್ ತಾಲೂಕಿನಲ್ಲಿ ಮನೆ ಹಾನಿಗೊಳಗಾದವರಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬ ಆಗಿರುವ ಕುರಿತಂತೆ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಈಶ್ವರ ಖಂಡ್ರೆ, ಇಂದು ಅಥವಾ ನಾಳೆ ಸಂಜೆಯೊಳಗೆ ಮನೆ ಹಾನಿಯ ಪರಿಹಾರ ಸಂತ್ರಸ್ತರಿಗೆ ದೊರಕುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿ, ವಿಳಂಬ, ಕರ್ತವ್ಯಲೋಪ, ನಿರ್ಲಕ್ಷ್ಯ ತೋರಿರುವ ಅಧಿಕಾರಿ, ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದರು.
ಪರಿಹಾರ ಪೋರ್ಟಲ್ ನಲ್ಲಿ ದಾಖಲಿಸಿದ ಮಾಹಿತಿ ಪ್ರದರ್ಶಿಸಲು ಸೂಚನೆ:
ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಪೋರ್ಟಲ್ ನಲ್ಲಿ ದಾಖಲಿಸುವ ಪ್ರತಿಯೊಂದು ಮಾಹಿತಿಯನ್ನೂ ಗ್ರಾಮಪಂಚಾಯ್ತಿ, ತಹಶೀಲ್ದಾರರ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಬಹಿರಂಗವಾಗಿ ಪ್ರಕಟಿಸಿ, ಡಂಗೂರ ಹೊಡೆಸಿ, ಆಕ್ಷೇಪಣೆ ಆಹ್ವಾನಿಸಿ, ಯಾವುದೇ ಸಂತ್ರಸ್ತರ ಮಾಹಿತಿ ಕಣ್ತಪ್ಪಿನಿಂದ ಬಿಟ್ಟುಹೋಗಿದ್ದರೆ ಆಗ ಅವರ ಹೆಸರು ಸೇರ್ಪಡೆ ಮಾಡಲು ಸಹಕಾರಿ ಆಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಮಿಡ್ ಸೀಸನ್ ಅಡ್ವರ್ಸಿಟಿ ಸೇರ್ಪಡೆಗೆ ಕ್ರಮ:
ಬೆಳೆ ವಿಮೆಯಡಿ ಬೆಳೆ ಋತುವಿನ ಮಧ್ಯದಲ್ಲಿ ವಿಕೋಪ ಉಂಟಾದರೆ ಪರಿಹಾರದ ಅವಕಾಶ ಕಲ್ಪಿಸಿದರೆ (ಮಿಡ್ ಸೀಸನ್ ಅಡ್ವರ್ಸಿಟಿ ಇನ್ವೋಕ್) ರೈತರಿಗೆ ಸೂಕ್ತ ಪರಿಹಾರ ಸಿಗುತ್ತದೆ. ಇನ್ವೋಕ್ ಆಗದಿದ್ದರೆ ರೈತರಿಗೆ ಅನ್ಯಾಯ ಆಗುತ್ತಿದೆ. ಕೂಡಲೇ ಈ ಬಗ್ಗೆ ಕ್ರಮವಹಿಸಿ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕವರ್ ಕಂಡಕ್ಟರ್ ಅಳವಡಿಸಲು ಸೂಚನೆ:
ಕಡಿದು ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಪ್ರಸ್ತಾಪಿಸಿದಾಗ, ಆಘಾತ ವ್ಯಕ್ತಪಡಿಸಿದ ಈಶ್ವರ ಖಂಡ್ರೆ, ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಚಿಸಿ, ವಿದ್ಯುತ್ ತಂತಿಗಳು ಜಾಯಿಂಟ್ ಹಾಕಿರುವ ಕಡೆ ಕತ್ತರಿಸಿ ಬೀಳದಂತೆ ಕವರ್ ಕಂಡಕ್ಟರ್ ಗಳನ್ನು ಅಳವಡಿಸಲು ಸೂಚಿಸಿದರು.
ತಹಶೀಲ್ದಾರ್ ಗಳಿಗೆ ಸೂಚನೆ:
ಜಿಲ್ಲೆಯಲ್ಲಿ ಮಳೆಯಿಂದ ಎಷ್ಟು ಜೀವ ಹಾನಿ ಆಗಿದೆ, ಎಷ್ಟು ಬೆಳೆ ಹಾನಿ ಆಗಿದೆ, ಎಷ್ಟು ಮನೆ ಹಾನಿ ಆಗಿದೆ, ರಸ್ತೆಗಳಿಗೆ ಹಾನಿ ಆಗಿದೆ ಮತ್ತು ಕೈಗೊಂಡಿರುವ ಕ್ರಮಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತತ್ ಕ್ಷಣವೇ ಆಯಾ ಕ್ಷೇತ್ರವ್ಯಾಪ್ತಿಯ ಶಾಸಕರಿಗೆ ಮಾಹಿತಿ ನೀಡುವಂತೆ ಎಲ್ಲಾ ತಹಶೀಲ್ದಾರರುಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಚಿವ ರಹೀಂಖಾನ್, ಶಾಸಕರುಗಳಾದ ಡಾ. ಶೈಲೇಂದ್ರ ಬೆಲ್ದಾಳೆ, ಭೀಮರಾವ್ ಪಾಟೀಲ್, ಚಂದ್ರಶೇಖರ ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗಂಟಿ, ಡಿಸಿಎಫ್ ಆಶೀಷ್ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT