ಬೆಂಗಳೂರು: ರಾಜ್ಯದ ರೈತರಿಗೆ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ರೈತರ ಜಮೀನುಗಳ ಪೌತಿ ಖಾತೆ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸಿದ್ದು, ‘ಇ-ಪೌತಿ’ ತಂತ್ರಾಂಶದ ಮೂಲಕ ಆಂದೋಲನ ರೂಪದಲ್ಲಿ ಜಾರಿಗೆ ತರಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಪಿ.ಎಚ್ .ಪೂಜಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ ಹೊಸ ನಿಯಮದಂತೆ ಮರಣ ಹೊಂದಿದ ಖಾತೆದಾರರ ವಾರಸುದಾರರನ್ನು ಪತ್ತೆಹಚ್ಚಲು ಆಧಾರ್, ಇ-ಕೆವೈಸಿ ಮತ್ತು ವಂಶವೃಕ್ಷ ಕಡ್ಡಾಯಗೊಳಿಸಲಾಗಿದೆ ಎಂದರು.
ಗ್ರಾಮ ಆಡಳಿತಾಧಿಕಾರಿಗಳು ಸ್ವಯಂಪ್ರೇರಿತರಾಗಿ ರೈತರ ಮನೆ ಬಾಗಿಲಿಗೆ ತೆರಳಿ ದಾಖಲೆಗಳನ್ನು ಸಂಗ್ರಹಿಸಿ, ಮೊಬೈಲ್ ಆ್ಯಪ್ ಮೂಲಕ ಸ್ಥಳದಲ್ಲೇ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಪಹಣಿಗಳಿಗೆ ಆಧಾರ್ ಜೋಡಣೆ ಅಭಿಯಾನದ ಮೂಲಕ ಮೃತ ಮಾಲೀಕರ ಜಮೀನು ಗುರುತಿಸಿ, ಅಂತಹ ಭೂಮಿ ವಾರಸುದಾರರಿಗೆ ಹಕ್ಕು ಬದಲಾವಣೆ ಮಾಡಿಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮರಣ ಪ್ರಮಾಣಪತ್ರ ಅಥವಾ ಕೋರ್ಟ್ ಆದೇಶ ಪಡೆಯಲು ಅಡೆತಡೆಗಳಿದ್ದ ಸಂದರ್ಭದಲ್ಲಿ, ವಾರಸುದಾರರ ಅಫಿಡವಿಟ್ ಹಾಗೂ ಗ್ರಾಮ ಆಡಳಿತಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರ ಮಹಜರ್ ವರದಿ ಆಧಾರದ ಮೇಲೆ ಪೌತಿ ಖಾತೆ ನೀಡಲು ಅವಕಾಶ ನೀಡಲಾಗಿದೆ.








