ಬೆಂಗಳೂರು: ರೈತರು ತಮ್ಮ ಜಮೀನಿನ ಹಳೆಯ ಪಹಣಿ, ಮುಟೇಶನ್ ಸೇರಿದಂತೆ ಇನ್ನಿತರ ಕಂದಾಯ ದಾಖಲೆಗಳನ್ನು ಪಡೆಯಲು ತಿಂಗಳುಗಟ್ಟಲೆ ತಹಶೀಲ್ದಾರ್ ಕಚೇರಿಗೆ ಅಲೆಯುವ ದಿನಗಳು ಇನ್ಮುಂದೆ ದೂರವಾಗಲಿವೆ. ಕಂದಾಯ ಇಲಾಖೆಯು ‘ಭೂ ಸುರಕ್ಷಾ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಜಮೀನಿಗೆ ಸಂಬಂಧಪಟ್ಟ ಎಲ್ಲಾ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿದೆ.
ಏನಿದು ಭೂ ಸುರಕ್ಷಾ ಯೋಜನೆ?
ಈ ಹಿಂದೆ ಕೃಷಿಕರು ತಮ್ಮ ಜಮೀನಿನ ಹಳೆಯ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿ, ಕಂದಾಯ ಇಲಾಖೆಯಿಂದ ದಾಖಲೆ ಕೈಸೇರುವವರೆಗೆ ಕಚೇರಿಗೆ ಅಲೆದಾಡಬೇಕಿತ್ತು. ಇದರಿಂದ ರೈತರಿಗೆ ಸಮಯ ಹಾಗೂ ಹಣದ ವ್ಯಯವಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಜಾರಿಯಾಗಿರುವುದೇ ‘ಭೂ ಸುರಕ್ಷಾ’ ಯೋಜನೆ.
ಈ ಯೋಜನೆಯಡಿ ಜಮೀನಿನ ಎಲ್ಲಾ ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ಇನ್ನು ಮುಂದೆ ರೈತರು ನೇರವಾಗಿ ಕಂದಾಯ ಇಲಾಖೆಯ ರೆಕಾರ್ಡ್ ರೂಂ (Record Room) ವಿಭಾಗಕ್ಕೆ ಭೇಟಿ ನೀಡಿ, ನಿಗದಿತ ಶುಲ್ಕ ಪಾವತಿಸಿ ಸ್ಥಳದಲ್ಲೇ ತ್ವರಿತವಾಗಿ ತಮ್ಮ ದಾಖಲೆಗಳನ್ನು ಪಡೆದುಕೊಳ್ಳಬಹುದು.
ಮೊಬೈಲ್ ನಲ್ಲೇ ದಾಖಲೆ ಪಡೆಯುವ ಸೌಲಭ್ಯ
ಕಚೇರಿಗೆ ಭೇಟಿ ನೀಡಲು ಸಾಧ್ಯವಾಗದ ರೈತರು ತಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಕಂದಾಯ ಇಲಾಖೆಯ ‘ರೆಕಾರ್ಡ್ ರೂಂ’ ವೆಬ್‌ಸೈಟ್‌ಗೆ ಭೇಟಿ ನೀಡಿ, ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಿ ಕ್ಷಣಾರ್ಧದಲ್ಲಿ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಆನ್‌ಲೈನ್ ನಲ್ಲಿ ದಾಖಲೆ ಪಡೆಯುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ:
ರೈತರು ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ದಾಖಲೆ ಪಡೆಯಬಹುದು:
ಹಂತ 1 (ವೆಬ್‌ಸೈಟ್ ಭೇಟಿ): ಮೊದಲಿಗೆ ಕಂದಾಯ ಇಲಾಖೆಯ ಅಧಿಕೃತ ಲಿಂಕ್ https://recordroom.karnataka.gov.in/service4 ಮೇಲೆ ಕ್ಲಿಕ್ ಮಾಡಿ ‘ರೆಕಾರ್ಡ್ ರೂಂ’ ತಂತ್ರಾಂಶವನ್ನು ಪ್ರವೇಶಿಸಿ.
ಹಂತ 2 (ಲಾಗಿನ್): ಮುಖಪುಟದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ “ಓಟಿಪಿ ರಚಿಸಿ (Generate OTP)” ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಹಾಕಿ ಲಾಗಿನ್ ಆಗಿ.
ಹಂತ 3 (ಪ್ರೊಫೈಲ್ ರಚನೆ): ಲಾಗಿನ್ ಆದ ಬಳಿಕ ಅಲ್ಲಿ ಕೇಳಲಾಗುವ ನಿಮ್ಮ ಹೆಸರು, ವಿಳಾಸ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ “ಉಳಿಸಿ (Save)” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ವಿವರವನ್ನು ರಚಿಸಿಕೊಳ್ಳಿ.
ಹಂತ 4 (ದಾಖಲೆ ಶೋಧನೆ): ನಂತರ “ಕಡತ ವಿನಂತಿಯನ್ನು ನಮೂದಿಸಿ (Enter File Request)” ಆಯ್ಕೆಯನ್ನು ಕ್ಲಿಕ್ ಮಾಡಿ ಕಡತದ ವಿವರ ಭರ್ತಿ ಮಾಡಿ. ಬಳಿಕ ‘Next’ ಒತ್ತಿ, “ಗ್ರಾಮದಲ್ಲಿ ಶೋಧಿಸಿ (Search within the village)” ಆಯ್ಕೆ ಮಾಡಿಕೊಳ್ಳಿ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಫೈಲ್/ರಿಜಿಸ್ಟರ್ ಆಯ್ಕೆ ಮಾಡಿ, ನಿಮ್ಮ ಸರ್ವೆ ನಂಬರ್ ಹಾಕಿ ‘Search’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5 (ಶುಲ್ಕ ಪಾವತಿ & ಡೌನ್‌ಲೋಡ್): ಪಟ್ಟಿಯಲ್ಲಿ ನಿಮಗೆ ಬೇಕಾದ ದಾಖಲೆಯನ್ನು ಆಯ್ಕೆ ಮಾಡಿಕೊಂಡು ‘Next’ ಬಟನ್ ಒತ್ತಿ. ಕೊನೆಯಲ್ಲಿ “Finish” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ನಿಮ್ಮ ದಾಖಲೆಯನ್ನು ಯಶಸ್ವಿಯಾಗಿ ಡೌನ್‌ಲೋಡ್ ಮಾಡಿಕೊಳ್ಳಿ.
ಕಂದಾಯ ಇಲಾಖೆಯ ಈ ಡಿಜಿಟಲ್ ಹೆಜ್ಜೆಯಿಂದಾಗಿ ರೈತರಿಗೆ ಕಚೇರಿಗಳ ಅಲೆದಾಟ ತಪ್ಪುವುದರ ಜೊತೆಗೆ, ಮಧ್ಯವರ್ತಿಗಳ ಹಾವಳಿಗೂ ಬ್ರೇಕ್ ಬೀಳಲಿದೆ.








